LATEST NEWS
ಕುಂಪಲದಲ್ಲಿ ಮಹಾ ಮೃತ್ಯುಂಜಯ ಹೋಮ – ಪ್ರಶ್ನಾ ಚಿಂತನೆಯಲ್ಲಿ ಬಂದಿದ್ದೇನು…?
ಮಂಗಳೂರು ಜನವರಿ 27: ಈ ಗ್ರಾಮದಲ್ಲಿ ಅಕಾಲಿಕವಾಗಿ ಸಾವನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇದೀಗ ಈ ಸಾವು ನೋವು ತಡೆಯಲು ಕುಂಪಲದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಸಲಾಯಿತು.
ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಗ್ರಾಮದಲ್ಲಿ 2019 ರಿಂದ ಸರಣಿ ಸಾವುಗಳು ಸಂಭವಿಸಿದೆ. ಸುಮಾರು ಮಂದಿ ಹದಿಹರೆಯದವರು ಆತ್ಮಹತ್ಯೆಗೆ ಶರಣಾಗಿದ್ದರು, ಇನ್ನು ಕೆಲವರು ಅಪಘಾತದಲ್ಲಿ ಸಾವನಪ್ಪಿದ್ದರು. ಇದು ಇಡೀ ಗ್ರಾಮದ ಜನರ ಚಿಂತೆಗೆ ಕಾರಣವಾಗಿತ್ತು,
ರೂಪದರ್ಶಿಯಾಗಿದ್ದ ಪ್ರೇಕ್ಷಾ ಎಂಬ ಯುವತಿ ನೇಣಿಗೆ ಕೊರಳೊಡ್ಡಿದ್ದರೆ, ಅಶ್ವಿನಿ ಬಂಗೇರ ಎಂಬ ಯುವತಿ ಗೃಹಪ್ರವೇಶವಾದ ಐದೇ ದಿನದಲ್ಲಿ ತನ್ನದೇ ನೂತನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಲ್ಲದೆ ಸ್ವಂತ ಮನೆ ನವೀಕರಣ ವೇಳೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಸ ಕುಂಪಲ ಒಂದು ರೀತಿ ಸೂಸೈಡ್ ಸ್ಪಾಟ್ ಆಗಿ ಪರಿಣಮಿಸಿತ್ತು,
ಇದರಿಂದ ಕಂಗೆಟ್ಟ ಊರಿನ ಮಂದಿ ಕುಂಪಲದ ಆದಿಶಕ್ತಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ದೈವಜ್ಞರ ಮೂಲಕ ಪ್ರಶ್ನಾ ಚಿಂತನೆಯನ್ನಿಟ್ಟರು. ಈ ಪ್ರಶ್ನಾ ಚಿಂತನೆಯಲ್ಲಿ ಕುಂಪಲ ಗ್ರಾಮದ ಜನತೆಯ ಸರಣಿ ಸಾವಿಗೆ ದೈವದ ಮುನಿಸೇ ಕಾರಣ ಎಂಬ ಸುಳಿವು ಸಿಕ್ಕಿತು. ಇದರ ಜೊತೆ ಗ್ರಾಮದ ಜನರ ಅಕಾಲಿಕ ಮರಣಕ್ಕೆ ತಡೆ ನೀಡಲು ಮಹಾ ಮೃತ್ಯುಂಜಯ ಯಾಗ ನಡೆಸಲು ಸೂಚಿಸಲಾಗಿತ್ತು. ಅದರಂತೆ ಈ ಸಾವು ನೋವು ತಡೆಯಲು ಕುಂಪಲದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಸಲಾಯಿತು.
ದೈವಜ್ಞರ ಮೂಲಕ ನಡೆದ ಪ್ರಶ್ನಾಚಿಂತನೆಯಲ್ಲಿ ಕುಂಪಲ ಗ್ರಾಮದ ಪೂರ್ವ ದಿಕ್ಕಿನಲ್ಲಿ ದೈವ ಸಾನಿಧ್ಯ ಇರುವ ಬಗ್ಗೆ ಸುಳಿವು ಸಿಕ್ಕಿತ್ತು. ಆದರೆ, ಈ ದೈವದ ಗುಡಿ ಪಾಳು ಬಿದ್ದು ದೈವಕ್ಕೆ ಕಾಲಾದಿಯಲ್ಲಿ ನಡೆಯುವ ಪೂಜೆ, ಪುನಸ್ಕಾರಗಳು ನಿಂತಿರುವ ಬಗ್ಗೆ ಗೋಚರವಾಗಿದೆ. ಹೀಗಾಗಿ ದೈವ ಅಸಮಾಧಾನಗೊಂಡು ತನ್ನ ರೂಪವನ್ನು ಋಣಾತ್ಮಕವಾಗಿ ತೋರಿಸುತ್ತಿದೆ ಎಂದು ತಿಳಿದುಬಂದಿದೆ. ಈ ದೈವಸ್ಥಾನ ಬೆಳಗುವ ಮೊದಲು ಗ್ರಾಮದಲ್ಲಿ ಮಹಾ ಮೃತ್ಯುಂಜಯ ಯಾಗ ನಡೆಸುವಂತೆ ಪ್ರಶ್ನೆಯಲ್ಲಿ ಕಂಡುಬಂದಿತ್ತು. ಹೀಗಾಗಿ ಮೃತ್ಯು ಪಾಶದಿಂದ ಪಾರಾಗಲು ಹಿಂದೂ ಧರ್ಮದಲ್ಲಿ ನಡೆಸಲಾಗುವ ಮಹಾ ಮೃತ್ಯುಂಜಯ ಯಾಗವನ್ನು ಕುಂಪಲದ ಚಾಮುಂಡೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಸಲಾಯಿತು. ಗ್ರಾಮದ ಕೇಸರಿ ಮಿತ್ರ ವೃಂದ ಹಾಗೂ ಗ್ರಾಮಸ್ಥರು ಸೇರಿ ಪುರೋಹಿತ ವೃಂದದ ನೇತೃತ್ವದಲ್ಲಿ, ವೇದ ಮಂತ್ರ ಪಠಣಗಳೊಂದಿಗೆ ಅತೀದೊಡ್ಡ ಯಾಗ ನಡೆಸಲಾಯಿತು. ಗ್ರಾಮದ ಜನ 21 ದಿನಗಳ ವೃತಾಚರಣೆಯನ್ನು ಮಾಡಿ ಭಕ್ತಿ ಭಾವದಿಂದ ಯಾಗದಲ್ಲಿ ಭಾಗಿಯಾದ್ದರು.