LATEST NEWS
ಕುಳಾಯಿ – ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಸಿಂದನೂರು ಶಾಸಕ ಹಂಪನಗೌಡ ಬಾದರ್ಲಿ ಅವರ ಸಹೋದರಿಯ ಪುತ್ರ ಸಾವು

ಮಂಗಳೂರು ಫೆಬ್ರವರಿ 23: ಊಟ ಮುಗಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸಿಂದನೂರು ಶಾಸಕ ಹಂಪನಗೌಡ ಬಾದರ್ಲಿ ಅವರ ಸಹೋದರಿಯ ಪುತ್ರ ದೀಪುಗೌಡ (50) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ರಾಯಚೂರು ಜಿಲ್ಲೆಯ ಸಿಂದನೂರಿನವರಾದ ದೀಪು ಗೌಡ ಅಲಿಯಾಸ್ ಪೊಂಪನ ಗೌಡ (48) ಮೃತರು. ದೀಪು ಗೌಡ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರ ಸಹೋದರಿಯ ಪುತ್ರ. ಘಟನೆಯಲ್ಲಿ ಪ್ರದೀಪ್ ಮತ್ತು ನಾಗರಾಜ್ ಅವರು ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರು ಕುಳಾಯಿಯ ಶಂಕರ ಭವನ ಹೋಟೆಲ್ ನಲ್ಲಿ ಊಟ ಮುಗಿಸಿಕೊಂಡು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭ ಉಡುಪಿ ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನವೊಂದು ಅತೀವೇಗದಿಂದ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದೀಪು ಗೌಡ ಪ್ರದೀಪ್ ಮತ್ತು ನಾಗರಾಜ್ ರವರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಪ್ರದೀಪ್ ಮತ್ತು ನಾಗರಾಜ್ ರವರು ರಸ್ತೆಗೆ ಎಸೆಯಲ್ಪಟ್ಟರೆ , ದೀಪು ಗೌಡ ಕಾರಿನ ಜೊತೆಯೇ ರಸ್ತೆ ಬದಿ ನಿಲ್ಲಿಸಿದ್ದ ಗೂಡ್ಸ್ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದೀಪು ಗೌಡ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಉಡುಪಿ-ಮಂಗಳೂರು ರಸ್ತೆಯಲ್ಲಿ ಸುಕುಮಾರ್ ಚಲಾಯಿಸುತ್ತಿದ್ದ ಪಿಕಪ್ ವಾಹನದ ಅತಿಯಾದ ವೇಗ ಹಾಗೂ ನಿರ್ಲಕ್ಷéದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಚಾಲಕ ನಿರ್ಲಕ್ಷéದಿಂದ ವಾಹನ ಚಲಾಯಿಸಿದ ಪರಿಣಾಮ ಕಾರಿಗೆ ಪಿಕಪ್ ಢಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತಕ್ಕೀಡಾದವರು ಮಿತ್ರರಾಗಿದ್ದು, ವ್ಯಾಪಾರದ ಕುರಿತ ಕೆಲಸಕ್ಕಾಗಿ ಮಂಗಳೂರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.