Connect with us

DAKSHINA KANNADA

ತಾರಕಕ್ಕೇರಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಮಠದ ವಿವಾದ

ತಾರಕಕ್ಕೇರಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಮಠದ ವಿವಾದ

ಪುತ್ತೂರು ಅಕ್ಟೋಬರ್ 14: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಕಿರುಕುಳಕ್ಕೆ ಬೇಸತ್ತು ಶ್ರೀಸಂಪುಟ ನರಸಿಂಹಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇದರೊಂದಿಗೆ ದೇವಸ್ಥಾನ ಹಾಗೂ ಮಠದ ನಡುವಿನ ವಿವಾದ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ.

800 ವರ್ಷಗಳ ಇತಿಹಾಸದ ಮಠದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಅನೇಕ ರೀತಿಯ ಕಿರುಕುಳ ಅನುಭವಿಸುತ್ತಿದ್ದು, ಅದು ಇತ್ತೀಚೆಗೆ ಅಸಹನೀಯ ಮಟ್ಟಕ್ಕೆ ತಲುಪಿದ್ದರಿಂದ ನೊಂದು ಉಪವಾಸ ಆರಂಭಿಸಿದ್ದೇವೆ ಎಂದು ಸ್ವಾಮೀಜಿ ತಿಳಿಸಿದ್ದಾರೆ. ಸುಬ್ರಹ್ಮಣ್ಯ ಮತ್ತು ನರಸಿಂಹ ದೇವರು ಸುಪ್ರೀತರಾಗಿ ಎಲ್ಲರಿಗೂ ಒಳ್ಳೆಯ ಬುದ್ಧಿ ಕೊಟ್ಟು ಶ್ರೀಕ್ಷೇತ್ರ ಬೆಳಗುವಂತಾಗಲಿ ಎಂದು ಪ್ರಾರ್ಥಿಸುತ್ತ ಏಕಾಂತದ ಉಪವಾಸ ಆರಂಭಿಸಿದ್ದೆವು. ಇದು ಯಾರಿಗೂ ತಿಳಿಯಬಾರದು ಎನ್ನುವುದು ಆಶಯವಾಗಿತ್ತು. ಆದರೆ ಆಕಸ್ಮಾತ್ ಬಹಿರಂಗವಾಗಿದೆ. ಭಕ್ತರು ಸ್ಪಂದಿಸುತ್ತಿದ್ದು, ಅವರ ಪ್ರೀತಿ-ವಿಶ್ವಾಸಕ್ಕೆ ಆಭಾರಿಯಾಗಿದ್ದೇವೆ ಎಂದು ಶ್ರೀಗಳು ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ನಡೆಯುವ ಸೇವೆಗಳ ಕುರಿತು ದೇವಸ್ಥಾನ ಮತ್ತು ಮಠದ ನಡುವೆ ಹಲವು ಸಮಯದಿಂದ ಸಂಘರ್ಷ ನಡೆಯುತ್ತಿದೆ. ಈ ಕುರಿತು ಹೇಳಿಕೆ-ಪ್ರತಿ ಹೇಳಿಕೆ, ಪ್ರತಿಭಟನೆಗಳೂ ನಡೆದಿವೆ. ಈ ಮಧ್ಯೆ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಮುಂಜಾನೆ 4.30ಕ್ಕೆ ನಿತ್ಯಾನುಷ್ಠಾನ ಆರಂಭಿಸುತ್ತೇವೆ. ಅದೇ ಹೊತ್ತಿಗೆ 4.45ರಿಂದಲೇ ದೇವಸ್ಥಾನದ ಗೋಪುರದಲ್ಲಿ 2 ಮೈಕ್​ಗಳನ್ನು ಜೋರಾಗಿ ಹಾಕಿ ಅನುಷ್ಠಾನ-ಪಾಠ ಪ್ರವಚನಕ್ಕೆ ತೊಂದರೆ ಮಾಡುತ್ತಿದ್ದಾರೆ. ರಥಬೀದಿಗೆ ಮುಖ ಮಾಡಿದ್ದ ಮೈಕ್​ಅನ್ನು ಮಠದತ್ತ ತಿರುಗಿಸಿರುವುದು ಯಾಕೆ ಎಂದು ಶ್ರೀಗಳು ಪ್ರಶ್ನಿಸಿದ್ದಾರೆ.

ಮಠದ ಗೋಶಾಲೆಯಲ್ಲಿನ ಅನಾಥ ಹಸುಗಳನ್ನು ಸಾಕಲು ಬೆಟ್ಟದಿಂದ ಸಹಜವಾಗಿ ಹರಿದು ಬರುವ ನೀರನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ ಇತ್ತೀಚೆಗೆ ಅರಣ್ಯ ಇಲಾಖೆಗೆ ದೂರು ನೀಡಿ ನೀರನ್ನು ತಡೆದಿದ್ದಾರೆ. ಒಂದು ವಾರದಿಂದ ಹಸುಗಳಿಗೆ ತೊಂದರೆಯಾಗಿದೆ. ಅವುಗಳು ಉಪವಾಸ ಇರುವಾಗ ನಾವು ವಿಜೃಂಭಣೆಯಿಂದ ಆಹಾರ ತೆಗೆದುಕೊಳ್ಳುವುದು ಬೇಡ ಎಂಬ ಭಾವನೆ ತಳೆದಿದ್ದೇವೆ ಎನ್ನುತ್ತಾರೆ ಶ್ರೀಗಳು.

ದೇವಸ್ಥಾನದ ಆಡಳಿತ ಮಂಡಳಿ ಅಲ್ಲಲ್ಲಿ ಫ್ಲೆಕ್ಸ್ ಅಳವಡಿಸಿ, ಅದರಲ್ಲಿ ಸಂಪುಟ ನರಸಿಂಹ ದೇವರ ಹೆಸರನ್ನು ಹಾಕಿ ಮಠದ ತೇಜೋವಧೆ, ಅವಮಾನ ಆಗುವ ರೀತಿ ನಡೆದುಕೊಳ್ಳುತ್ತಿದೆ. ದೇವಸ್ಥಾನದ ಹೊರಾಂಗಣದಲ್ಲಿ ಸಂಪುಟ ನರಸಿಂಹ ದೇವರ ಹೆಸರನ್ನು ಉಲ್ಲೇಖಿಸಿ ಅನೌನ್ಸ್​ಮೆಂಟ್ ಮಾಡುವ ಮೂಲಕವೂ ತೇಜೋವಧೆ ಮಾಡಲಾಗುತ್ತಿದೆ. ಹಿಂದೊಮ್ಮೆ ಸಭೆ ನಡೆಸಿ ನಮ್ಮನ್ನು ಹೀನಾಯವಾಗಿ ನಿಂದಿಸಲಾಗಿತ್ತು. ಪ್ರತಿ ರಾತ್ರಿ ಪೂಜೆ ಬಳಿಕ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಹೋಗುವುದು ಮಠದ ಸಂಪ್ರದಾಯ. ಆದರೆ ಈಗ ಅದಕ್ಕೂ ಅಡ್ಡಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *