DAKSHINA KANNADA
ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದೇಗುಲಕ್ಕೆ ರೂ. 146.01 ಕೋ ಆದಾಯ, ಸತತ 13 ವರ್ಷಗಳಿಂದ ರಾಜ್ಯದಲ್ಲೇ ನಂಬರ್ ವನ್..!
ಸುಬ್ರಹ್ಮಣ್ಯ: ದಕ್ಷಿಣ ಭಾರತದ ನಾಗಾರಾಧನೆಯ ಪುಣ್ಯ ಕ್ಷೇತ್ರ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಈ ಬಾರಿಯೂ ಆದಾಯದಲ್ಲಿ ರಾಜ್ಯದಲ್ಲೇ ನಂಬರ್ ವನ್ ದಾಖಲೆ ನಿರ್ಮಿಸಿದೆ.
2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕುಕ್ಕೆ ಕ್ಷೇತ್ರ 146.01 ಕೋಟಿ ರೂ ಆದಾಯ ಗಳಿಸಿದೆ. 2023 ಎಪ್ರೀಲ್‌ನಿಂದ 2024 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಲಭಿಸಿದೆ. ಈ ಮೂಲಕ ಸತತ 13ನೇ ವರ್ಷ ಆದಾಯದಲ್ಲಿ ರಾಜ್ಯದ ನಂಬರ್ ದೇವಳವಾಗಿ ಮುಂದುವರೆದಿದೆ.
ಕಳೆದ ವರ್ಷ123 ಕೋಟಿ ಆದಾಯ ಗಳಿಸಿತ್ತು. ಹಲವಾರು ವರ್ಷಗಳಿಂದ ನಿರಂತರವಾಗಿ ಆದಾಯ ಗಳಿಕೆಯಲ್ಲಿ ರಾಜ್ಯದ ನಂಬರ್ ದೇವಸ್ಥಾನವಾಗಿ ಹೊರ ಹೊಮ್ಮಿರುವ ಕುಕ್ಕೆಯು ಈ ಬಾರಿ 146.01 ಕೋಟಿ ರೂ ಆದಾಯ ಗಳಿಸುವ ಮೂಲಕ ಸತತವಾಗಿ ನಂಬರ್ ವನ್ ಸ್ಥಾನವನ್ನು ಗಟ್ಟಿಗೊಳಿಸಿದೆ.ಉಳಿದಂತೆ ರಾಜ್ಯ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಕೊಲ್ಲೂರು ಮುಕಾಂಬಿಕಾ ದೇವಳ 68.23 ಕೋಟಿ ರೂ, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ 30.73 ಕೋಟಿ ರೂ, ಸವದತ್ತಿ ರೇಣುಕಾ ಯಲ್ಲಮ್ಮ 25.80 ಕೋ ರೂ, ಮಂದಾರ್ತಿ ದುರ್ಗಾ ಪರಮೇಶ್ವರಿ ದೇವಸ್ಥಾನ 15.27 ಕೋ.ರೂ, ಕೊಪ್ಪಳ ಜಿಲ್ಲೆ ಹುಲಿಗೆಮ್ಮ ದೇವಿ ದೇವಸ್ಥಾನ 16.29 ಕೋ.ರೂ, ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ 13.65 ಕೋ ರೂ, ಬೆಂಗಳೂರಿನ ಬನಶಂಕರಿ ದೇವಸ್ಥಾನ 11.37 ಕೋ ರೂ ಆದಾಯ ಗಳಿಸಿದೆ.
ದೇವಸ್ಥಾನಕ್ಕೆ ಮುಖ್ಯವಾಗಿ ಗುತ್ತಿಗೆಗಳಿಂದ, ತೋಟದ ಉತ್ಪನ್ನದಿಂದ, ಕಟ್ಟಡ ಬಾಡಿಗೆಯಿಂದ, ಕಾಣಿಕೆಯಿಂದ, ಕಾಣಿಕೆ ಹುಂಡಿಯಿಂದ, ಹರಿಕೆ ಸೇವೆಗಳಿಂದ, ಅನುದಾನದಿಂದ, ಶಾಶ್ವತ ಸೇವೆಗಳಿಂದ, ಸೇವೆಗಳಿಂದ ಆದಾಯ ಬರುತ್ತಿದೆ.ಶ್ರೀ ದೇವಳದಲ್ಲಿ ಆದಾಯದ ಒಟ್ಟು ಲೆಕ್ಕಾಚಾರ ಈಗಾಗಲೇ ಮುಗಿದಿದೆ.ಉಳಿದಂತೆ ಸೇವೆ ಕಾಣಿಕೆ ಮೊದಲಾದುವುಗಳಿಂದ ಬಂದ ಆದಾಯದ ವಿಭಜನೆ ಇದೀಗ ನಡೆಯುತ್ತಿದ್ದು ಈ ಲೆಕ್ಕಾಚಾರವು ಇನ್ನೆರಡು ದಿನಗಳಲ್ಲಿ ದೊರಕಲಿದೆ.2006-07ರಲ್ಲಿ ದೇವಳದ ಆದಾಯವು 19.76 ಕೋಟಿ ರೂ. ಆಯಿತು. 2007-08ರಲ್ಲಿ 24.44 ಕೋಟಿ ರೂ.ಗಳಿಗೆ ಆದಾಯವು ನೆಗೆದು ರಾಜ್ಯದ ಶ್ರೀಮಂತ ದೇವಾಲಯವಾಗಿ ಪರಿಗಣಿತವಾಯಿತು. ನಂತರದ ವರ್ಷಗಳಲ್ಲಿ ರಾಜ್ಯದ ನಂ.1 ದೇವಸ್ಥಾನವೆಂದು ಪರಿಗಣಿಸಲ್ಪಟ್ಟಿತು. ಸತತ 13 ವರ್ಷಗಳಿಂದ ನಂಬರ್ ವನ್ ಪಟ್ಟವನ್ನು ದೇವಸ್ಥಾನ ಕಾಯ್ದುಕೊಂಡಿದೆ.