LATEST NEWS
ಕುಡುಪು ಗುಂಪು ಹಲ್ಲೆಗೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದೇ ಕಾರಣ ಎಂದು ಎಫ್ಐಆರ್ ದಾಖಲಿಸಿ ಯುವಕ

ಮಂಗಳೂರು ಮೇ 01: ಕುಡುಪುವಿನಲ್ಲಿ ಕ್ರಿಕೆಟ್ ಮ್ಯಾಚ್ ವೇಳೆ ನಡೆದ ಗಲಾಟೆ ವೇಳೆ ವಲಸೆ ಕಾರ್ಮಿಕ ಮೊಹಮ್ಮದ್ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಎಫ್ಐಆರ್ ದಾಖಲಾಗಿದ್ದು, ಮೃತ ವ್ಯಕ್ತಿ ಪಾಕಿಸ್ತಾನ ಪಾಕಿಸ್ತಾನ ಎಂದು ಕೂಗಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕುಡುಪು ಬಳಿ ಗುಂಪು ಹಲ್ಲೆಯಿಂದ ಕೇರಳದ ವ್ಯಕ್ತಿ ಮೃತಪಟ್ಟ ಘಟನೆ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. ದೀಪ್ ಕುಮಾರ್ ಎಂಬುವರು ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಘಟನೆಗೆ, ‘‘ಪಾಕಿಸ್ತಾನ ಪಾಕಿಸ್ತಾನ’’ ಎಂದು ಬೊಬ್ಬೆ ಹೊಡೆದಿದ್ದೇ ಕಾರಣ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಕ್ರಿಕೆಟ್ ಪಂದ್ಯದ ವೇಳೆ ಕೇರಳದ ವ್ಯಕ್ತಿ ಮೊಹಮ್ಮದ್ ಆಶ್ರಫ್, ‘‘ಪಾಕಿಸ್ತಾನ ಪಾಕಿಸ್ತಾನ’’ ಎಂದು ಘೋಷಣೆ ಕೂಗಿದ್ದ. ಆಗ ಸ್ಥಳದಲ್ಲಿ ಇದ್ದವರು ಆತನನ್ನು ಬೆನ್ನಟ್ಟಿ ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ದೀಪಕ್ ಕುಮಾರ್ ಉಲ್ಲೇಖಿಸಿದ್ದಾರೆ.

ಘಟನೆ ಸಂಬಂಧ ಮತ್ತೆ ಮೂವರನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ, ಪ್ರಕರಣದಲ್ಲಿ ಬಂಧನಕ್ಕೊಳಗಾದವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಮಂಗಳೂರು ನಗರದ ಕುಡುಪು ಎಂಬಲ್ಲಿ ಏಪ್ರಿಲ್ 27ರ ಭಾನುವಾರ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಮಂಗಳೂರಿನಲ್ಲಿ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕೇರಳದ ವಯನಾಡಿನ ಮನವಂತವಾಡಿಯ ಪುಲ್ಪಲ್ಲಿ ನಿವಾಸಿ ಮೊಹಮ್ಮದ್ ಆಶ್ರಫ್ ಅಲ್ಲಿಗೆ ಬಂದಿದ್ದ. ಸ್ಥಳದಲ್ಲಿ ಗಲಾಟೆ ಸಂಭವಿಸಿ ಆತನ ಮೇಲೆ ಹಲ್ಲೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತ ಮರುದಿನ ಮೃತಪಟ್ಟಿದ್ದ. ಘಟನೆಗೆ ಆತ ಪಾಕಿಸ್ತಾನ ಪರ ಘೋಷಣೆ ಕೂಗಿದ್ದೇ ಕಾರಣ ಎಂದು ಹೇಳಲಾಗಿತ್ತು.