Connect with us

LATEST NEWS

ಅರುಣ್ ಕುಮಾರ್ ಜಾರ್ಕಳಗೆ ಕುಂದೇಶ್ವರ ಸಮ್ಮಾನ್

ಕಾರ್ಕಳ ಜನವರಿ 19: ಕಾರ್ಕಳ ಹಿರ್ಗಾನ ಕ್ಷೇತ್ರದಿಂದ ಪ್ರತಿ ವರ್ಷ ನೀಡಲಾಗುವ ಶ್ರೀ ಕುಂದೇಶ್ವರ ಸಮ್ಮಾನ್‌ ಪ್ರಶಸ್ತಿಗೆ ಯಕ್ಷಗಾನ ಕಲಾವಿದ ಹಾಸ್ಯ ಚಕ್ರವರ್ತಿ ಅರುಣ್ ಕುಮಾರ್ ಜಾರ್ಕಳ ಆಯ್ಕೆಯಾಗಿದ್ದಾರೆ. ಜ.23ರಂದು ನಡೆಯುವ ಶ್ರೀ ಕುಂದೇಶ್ವರ ಜಾತ್ರೆಯ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.


ಅರುಣ್ ಕುಮಾರ್ ಜಾರ್ಕಳ‌ ಮಾತೃಭಾಷೆ ತೆಲುಗು. ದೊರೆಸ್ವಾಮಿ ಹಾಗೂ ಲೀಲಾವತಿ ದಂಪತಿ ಪುತ್ರ ಉದ್ಯೋಗ ನಿಮಿತ್ತವಾಗಿ ಜಾರ್ಕಳ ದಲ್ಲಿ ನೆಲೆಸಿದ್ದರು. ಈಗ ಪೆರ್ಣಂಕಿಲ ವಾಸವಿದ್ದಾರೆ ಧರ್ಮಸ್ಥಳ ತರಬೇತಿ ಶಿಬಿರದಲ್ಲಿ ಯಕ್ಷಗಾನದ ಅಭ್ಯಾಸ ಮಾಡಿ ಕಟೀಲು ಮೇಳಕ್ಕೆ ಸೇರಿಕೊಂಡರು. ಈಗ ತೆಂಕು ಮತ್ತು ಬಡಗುತಿಟ್ಟಿನಲ್ಲಿ ಬಹು ಬೇಡಿಕೆ ಕಲಾವಿದರು. ಸಾಲಿಗ್ರಾಮ ಮೇಳ ದಲ್ಲಿ ಪ್ರವರ್ಧಮಾನಕ್ಕೆ ಬಂದು ಪ್ರಸ್ತುತ ಬೆಂಕಿನಾಥೇಶ್ವರ ಮೇಳದಲ್ಲಿ ಪ್ರಧಾನ ಹಾಸ್ಯ ಕಲಾವಿದರಾಗಿದ್ದಾರೆ.

ವಿಶಿಷ್ಟ ಶೈಲಿಯ ಆಂಗಿಕ ಅಭಿನಯದಿಂದ ಜನರನ್ನು ನಗೆಗಡಲಲ್ಲಿ ತೇಲಿಸಬಲ್ಲ ಸಮರ್ಥ ಹಾಸ್ಯಗಾರರೆಂಬ ಖ್ಯಾತಿ ಇದೆ. ಶ್ವೇತ ಕುಮಾರ ಚರಿತ್ರೆಯ ಪ್ರೇತದ ಹಾಸ್ಯವಂತು ಸ್ಮರಣೀಯ. ಅಮೆರಿಕ ಹಾಗೂ ಲಂಡನ್‌ನಲ್ಲೂ ಯಕ್ಷಗಾನ ಪ್ರದರ್ಶಿಸಿದ್ದಾರೆ. ಜನವರಿ 23ರಂದು ರಾತ್ರಿ 7.30 ಗಂಟೆಗೆ ಬೆಂಕಿನಾಥೇಶ್ವರ ಮೇಳದವರಿಂದ ಶ್ರೀದೇವಿ ಅಗ್ನಿ ಕಲ್ಲುರ್ಟಿ ತುಳು ಬಯಲಾಟ ನಡೆಯಲಿದೆ. ಈ ಸಂದರ್ಭ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ವಿ. ಸುನಿಲ್ ಕುಮಾರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎಸ್ ಕೆ ಎಸ್ ಕಾರ್ಕಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಜಯಕುಮಾರ್ ಶೆಟ್ಟಿ, ಕಾರ್ಕಳ ಬಿಜೆಪಿ ಅಧ್ಯಕ್ಷ ನವೀನ್ ಕುಮಾರ್ ನಾಯಕ್, ಕಾರ್ಕಳ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಜಿತ್ ಹೆಗಡೆ ಮಾಳ ಭಾಗವಹಿಸುವರು. ಯಕ್ಷಗಾನ ಕಲಾವಿದ, ನ್ಯಾಯವಾದಿ ಶ್ರೀ ರಮಣಾಚಾರ್ ಅಭಿನಂದನಾ ಭಾಷಣ ಮಾಡುವರು.

ಜ.21ರಂದು ತೋರಣ ಮುಹೂರ್ತ ಧಾರ್ಮಿಕ ಕಾರ್ಯಕ್ರಮಗಳು, ಜ.22ರಂದು ವರ್ಷಾವಧಿ ಮಹೋತ್ಸವ, ಅನ್ನಸಂತರ್ಪಣೆ, ನೇಮೋತ್ಸವ ನಡೆಯಲಿದೆ ಎಂದು ಧರ್ಮದರ್ಶಿ ಕೃಷ್ಣರಾಜೇಂದ್ರ ಭಟ್‌ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *