Connect with us

DAKSHINA KANNADA

ಹಬ್ಬದ ಟೆನ್ಶನ್ ಬಿಟ್ಬಿಡಿ, ದೀಪಾವಳಿ ಸಮಯದಲ್ಲಿ KSRTC ಯಿಂದ ರಸ್ತೆಗಿಳಿಯಲಿವೆ 2000 ಹೆಚ್ಚುವರಿ ಬಸ್‌…!

ಬೆಂಗಳೂರು: ದೀಪಾವಳಿ, ಕನ್ನಡ ರಾಜ್ಯೋತ್ಸವ ಈ ಬಾರಿ ಒಟ್ಟೊಟ್ಟಿಗೆ ಬಂದಿದ್ದು ಜೊತೆಗೆ ಸಾಲು ಸಾಲು ರಜೆ ಬೇರೆ. ಹೀಗಾಗಿ ಊರಿಗೆ, ಪರವೂರಿಗೆ ಪ್ರವಾಸಕ್ಕೆ ಹೋಗುವವರ ಸಂಖ್ಯೆ ಸಹಜವಾಗಿ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ KSRTC 2000 ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ. ಅ.30ರಿಂದ ನ.2ರವರೆಗೆ 4 ದಿನ ಬೆಂಗಳೂರಿನಿಂದ ವಿವಿಧ ಪ್ರದೇಶಗಳಿಗೆ ಹಾಗೂ ನ.3 ಮತ್ತು 4ರಂದು ವಿವಿಧೆಡೆಯಿಂದ ಬೆಂಗಳೂರಿಗೆ ವಿಶೇಷ ಸಾರಿಗೆ ಇರಲಿದೆ.

ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣಗಳಿಂದ ಬಸ್‌ಗಳು ಸಂಚರಿಸಲಿವೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಬಸ್‌ ಇರಲಿದೆ.ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ವಿಶೇಷ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.
ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಬಕೋಣಂ, ಚೆನ್ನೈ, ಕೊಯಮತ್ತೂರು, ತಿರುಚ್ಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಹೋಗುವ ಸಾರಿಗೆ ಸಂಸ್ಥೆಯ ಪ್ರತಿಷ್ಠಿತ ಬಸ್‌ಗಳು ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಹೊರಡಲಿವೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳ ಆಸನಗಳನ್ನು ಮುಂಗಡವಾಗಿ ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್‌ಅಪ್ ಪಾಯಿಂಟ್‌ನ ಹೆಸರನ್ನು ಗಮನಿಸುವಂತೆ ಸಾರಿಗೆ ನಿಗಮವು ಕೋರಿದೆ. ಇ-ಟಿಕೇಟ್ ಬುಕಿಂಗ್‌ನ್ನು www.ksrtc.karnataka.gov.in ವೆಬ್‌ಸೈಟ್‌ ಮುಖಾಂತರ ಮಾಡಬಹುದಾಗಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಕಾಯ್ದಿರಿಸಿದಲ್ಲಿ ಶೇ. 5ರಷ್ಟು ರಿಯಾಯಿತಿ, ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಲ್ಲಿ ಬರುವ ಪ್ರಯಾಣ ದರದಲ್ಲಿ ಶೇ. 10ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯು ಹೇಳಿದೆ.

 

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *