KARNATAKA
ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪುರುಷರಿಗೆ ಸೀಟ್ ಬಿಟ್ಟು ಕೋಡಿ..!!

ಮೈಸೂರು ಫೆಬ್ರವರಿ 21: ಕೆಎಸ್ ಆರ್ ಟಿಸಿ ಬಸ್ ನಲ್ಲಿ ರಾಜ್ಯ ಸರಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದ ಬಳಿಕ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪುರುಷರಿಗೆ ಕುಳಿತುಕೊಳ್ಳಲು ಅವಕಾಶ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನಲೆ ಇದೀಗ ಪುರುಷರಿಗೆ ಮೀಸಲಿರುವ ಸೀಟ್‌ನಲ್ಲಿ ಪುರುಷರೇ ಕುಳಿತುಕೊಳ್ಳುವಂತೆ ನೋಡಿಕೊಳ್ಳಿ ಎಂದು ತನ್ನ ಸಿಬ್ಬಂದಿಗೆ ಕೆಎಸ್‌ಆರ್‌ಟಿಸಿ ಮೈಸೂರು ಘಟಕ ಸೂಚನೆ ನೀಡಿದೆ.
ರಾಜ್ಯ ಸರಕಾರ ಮಹಿಳೆಯರಿಗೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯದ ಸರ್ಕಾರಿ ಬಸ್ಸುಗಳು ಮಹಿಳಾ ಬಸ್ಸುಗಳಾಗಿ ಬದಲಾಗಿದೆ. ಉಚಿತ ಪ್ರಯಾಣ ಘೋಷಣೆಯಾದ ದಿನದಿಂದ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಮಗೆ ಸೀಟು ಸಿಗುತ್ತಿಲ್ಲ ಎಂದು ಪುರುಷರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಸ್ಸಿನಲ್ಲಿ ನಿಂತುಕೊಂಡೇ ಪ್ರಯಾಣಿಸಿ ರೋಸಿಹೋದ ಮೈಸೂರು ನಿವಾಸಿ ವಿಷ್ಣುವರ್ಧನ್ ಪುರುಷರಿಗೂ ಸೀಟ್ ಕೊಡಿ ಎಂದು ಕೆಎಸ್‌ಆರ್‌ಟಿಸಿ ಮೈಸೂರು ಘಟಕಕ್ಕೆ ದೂರು ಕೊಟ್ಟಿದ್ದಾರೆ. ಮೈಸೂರು ನಗರ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಬಹುತೇಕ ಮಹಿಳೆಯರೇ ಕುಳಿತುಕೊಂಡಿರುತ್ತಾರೆ. ನಮಗೆ ಸೀಟು ಸಿಗುತ್ತಿಲ್ಲ. ಹೀಗಾಗಿ ನಮಗೂ ಕುಳಿತುಕೊಳ್ಳಲು ಸೀಟು ಕೊಡಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಮೈಸೂರು ಘಟಕದಿಂದ ಕಾರ್ಯಾಚರಣೆಗೊಳ್ಳುವ ಎಲ್ಲಾ ಬಸ್‌ಗಳಲ್ಲಿಯೂ ಪುರುಷರಿಗೆ ಮೀಸಲಿರುವ ಸೀಟ್‌ನಲ್ಲಿ ಪುರುಷರೇ ಕುಳಿತುಕೊಳ್ಳುವಂತೆ ನೋಡಿಕೊಳ್ಳಿ ಅಂತ ಆಯಾ ಘಟಕಗಳ ನಿಯಂತ್ರಣಾಧಿಕಾರಿಗಳು ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ತಮ್ಮ ಸಿಬ್ಬಂದಿಗೆ ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗದ ನಿಯಂತ್ರಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
1 Comment