DAKSHINA KANNADA
ಕೆಎಸ್ಆರ್ ಟಿಸಿ 500 ಕೋಟಿ ಉಚಿತ ಟಿಕೆಟ್ – ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಸಿಹಿ ಹಂಚಿ ಸಂಭ್ರಮ

ಮಂಗಳೂರು, ಜುಲೈ 14: ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಉಚಿತ ಬಸ್ ಪ್ರಯಾಣಿಸುವ ಶಕ್ತಿ ಯೋಜನೆಯ ಹೊಸ ಮೈಲಿಗಲ್ಲು ತಲುಪಿದ್ದು, 500 ಕೋಟಿ ಮಹಿಳಾ ಪ್ರಯಾಣಿಕರು ಸಂಚರಿಸಿ ಹೊಸ ದಾಖಲೆ ತಲುಪಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್‍ಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಮಹಿಳಾ ಪ್ರಯಾಣಿಕರಿಗೆ ಸಿಹಿ ಮತ್ತು ಹೂ ಹಂಚಲಾಯಿತು.
2023 ರ ಜೂನ್ 11 ರಂದು ಶಕ್ತಿ ಯೋಜನೆ ಜಾರಿಗೆ ಬಂದಿದ್ದು, 2 ವರ್ಷಗಳ ಅವಧಿಗಳಲ್ಲಿ ರಾಜ್ಯಾದ್ಯಂತ ಕೆ.ಎಸ್.ಆರ್.ಟಿ.ಸಿ ಸಾಮಾನ್ಯ ಸಾರಿಗೆ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ವಿತರಣೆ ಮಾಡಿದ ಉಚಿತ ಪ್ರಯಾಣದ ಟಿಕೆಟ್‍ಗಳ ಸಂಖ್ಯೆ 500 ಕೋಟಿ ತಲುಪಿದೆ.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಮಾತನಾಡಿ, ಮಹಿಳಾ ಸ್ವಾವಲಂಬನೆ ಮತ್ತು ನಾರಿ ಶಕ್ತಿಯನ್ನು ಎತ್ತಿ ಹಿಡಿಯುವಲ್ಲಿ ಶಕ್ತಿಯೋಜನೆಯು ಜಗತ್ತಿನಲ್ಲಿ ಅತ್ಯಂತ ಮಾದರಿ ಯೋಜನೆಯಾಗಿದೆ. ಈ ಮೂಲಕ ಮಹಿಳೆಯರ ಹಣಕಾಸು ಸಾಮಥ್ರ್ಯವನ್ನು ಹೆಚ್ಚಿಸಿ ಅವರ ಪರಾವಲಂಬನೆಯನ್ನು ತಪ್ಪಿಸಿದೆ. ಇದರಿಂದ ರಾಜ್ಯದ ಹಲವಾರು ಕುಟುಂಬಗಳ ಸ್ಥಿತಿ ಉತ್ತಮಗೊಂಡು ಮಹಿಳೆಯರು ಧಾರ್ಮಿಕ, ಪ್ರವಾಸ ಮತ್ತು ಕೆಲಸದ ಸ್ಥಳಗಳಿಗೆ ನೆಮ್ಮದಿಯಿಂದ ಸಂಚರಿಸಬಹುದು ಎಂದು ಹೇಳಿದರು.
ಮಧ್ಯಮ ವರ್ಗದ ದುಡಿಯುವ ಮಹಿಳೆಯರು ದಿನನಿತ್ಯ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರಯಾಣಿಸಬೇಕಾಗುತ್ತದೆ. ಹಾಗೆಯೇ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರು ತಮ್ಮ ಉಜ್ವಲ ಭವಿಷ್ಯಕ್ಕಾಗಿ ವಿದ್ಯಾಭ್ಯಾಸ ಪಡೆಯಲು ದೂರದ ಶಾಲಾ-ಕಾಲೇಜುಗಳಿಗೆ ಪ್ರಯಾಣಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶಕ್ತಿ ಯೋಜನೆಯು ಕಡಿಮೆ ಆದಾಯವನ್ನು ಹೊಂದಿರುವ ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಬಹಳ ಉಪಯುಕ್ತವಾಗಿದೆ ಎಂದು ಅವರು ತಿಳಿಸಿದರು.