LATEST NEWS
ಕರಾವಳಿಯಲ್ಲಿ ರಂಗೇರಿದ ಕೃಷ್ಣ ಜನ್ಮಾಷ್ಠಮಿ ಸಂಭ್ರಮ – ಮಳೆಯಲ್ಲೂ ಮೊಸರುಕುಡಿಕೆ ವೈಭವ
ಮಂಗಳೂರು ಸೆಪ್ಟೆಂಬರ್ 08: ಕರಾವಳಿಯಾದ್ಯಂತ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಜಿಲ್ಲೆಯ ವಿವಿಧ ದೇವಸ್ಥಾವಗಳು , ಭಜನಾ ಮಂದಿರ ಸಂಘ ಸಂಸ್ಥೆಗಳ ವಠಾರದಲ್ಲಿ ವಿಶೇಷ ಪೂಜೆ ಭಜನೆಗಳೊಂದಿಗೆ ಶ್ರೀಕೃಷ್ಣ ಸ್ತುತಿ ನಡೆದು ಕೃಷ್ಣನಿಗೆ ಪ್ರಿಯವಾದ ಆಹಾರವನ್ನು ಅರ್ಪಿಸಲಾಯಿತು.
ಶ್ರೀಕೃಷ್ಣ ಜನ್ಮಾಷ್ಟಮಿಯ ಎರಡು ದಿನಗಳ ಸಡಗರಕ್ಕೆ ಗುರುವಾರ ಮುಸ್ಸಂಜೆಯಲ್ಲಿ ಧೋ ಎಂದು ಸುರಿದ ಮಳೆ ಮಧ್ಯೆ ನಡೆದ ವೈಭವದ ಮೊಸರು ಕುಡಿಕೆ ಅಷ್ಟಮಿಯ ಸಂಭ್ರಮವನ್ನು ದ್ವಿಗುಣಗೊಳಿಸಿತ್ತು. ಮಂಗಳೂರು ನಗರದ ಅಲ್ಲಲ್ಲಿ ನಡೆದ ಮೊಸರು ಕುಡಿಕೆ ಉತ್ಸವದಲ್ಲಿ ಕಿಕ್ಕಿರಿದು ಸೇರಿದ್ದ ಸಾವಿರಾರು ಜನರು ಬೆಳಕಿನ ಓಕುಳಿಯಲ್ಲಿ ಮಿಂದೆದ್ದರು.
ಕದ್ರಿ ಶ್ರೀಕೃಷ್ಣ ಜನ್ಮಮಹೋತ್ಸವ ಸಮಿತಿ ಆಶ್ರಯದಲ್ಲಿ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯ ನಂತರ ಶೋಭಾಯಾತ್ರೆ ನಡೆಯಿತು. ಅಲಂಕೃತ ವಿದ್ಯುದ್ದೀಪಗಳಿಂದ ಕಂಗೊಳಿಸುವ ಬೀದಿಗಳಲ್ಲಿ ಸ್ತಬ್ದಚಿತ್ರಗಳು, ಬೊಂಬೆ ಕುಣಿತ, ಚೆಂಡೆ ವಾದ್ಯ, ಹುಲಿವೇಷ ತಂಡಗಳು ಸಂಭ್ರಮದ ಮಧ್ಯೆ ಎತ್ತರದ ಕಮಾನುಗಳಿಗೆ ಕಟ್ಟಲಾಗಿದ್ದ ವೈವಿಧ್ಯ ಮೊಸರು ಕುಡಿಕೆಗಳನ್ನು ಉತ್ಸಾಹಿ ಯುವಕರ ತಂಡಗಳು ಒಬ್ಬರ ಮೇಲೊಬ್ಬರು ನಿಂತು ಒಡೆದು ಹಾಕಿ ಖುಷಿ ಪಟ್ಟರು.ಈ ರಂಗಿನಾಟವು ಜಮಾಯಿಸಿದ ಸಾವಿರಾರು ನೋಡುಗರಿಗೆ ಮುದ ನೀಡಿತು.