Connect with us

DAKSHINA KANNADA

ಕಂದಾಯ ಸಚಿವರಿಂದ ಮಿಂಚಿನ ಸಂಚಾರ, ದಿಢೀರ್ ಆಗಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿದ ಕೃಷ್ಣ ಭೈರೇಗೌಡ

ಮಂಗಳೂರು, ಆಗಸ್ಟ್, 29: ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಆ.29ರ ಮಂಗಳವಾರ ಮಂಗಳೂರಿನ ತಾಲೂಕು ಕಚೇರಿ, ಪಡೀಲಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಕಾಮಗಾರಿಯ ಪ್ರಗತಿ ಹಾಗೂ ಉಲ್ಲಾಳದ ಮುಕ್ಕಚೇರಿ ಪ್ರಾಥಮಿಕ ಶಾಲೆ, ಸೋಮೇಶ್ವರ ಪುರಸಭೆ, ಬಟ್ಟಂಪಾಡಿಯಲ್ಲಿ ಮಿಂಚಿನ ಸಂಚಾರ ನಡೆಸಿದರು.

ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದ‌ ಅವರು, ಅಧಿಕಾರಿಗಳು ಜಿಲ್ಲೆಯ ಜನರ ಸಮಸ್ಯೆಗಳಿಗೆ ಕಾಲ ಮಿತಿಯೊಳಗೆ ಸ್ಪಂದಿಸಿ ಇತ್ಯರ್ಥ ಮಾಡಬೇಕು. ಜನರ ಕೆಲಸ ಕಾರ್ಯಗಳು ಸುಗಮ ರೀತಿಯಲ್ಲಿ ಯಾವುದೇ ತೊಂದರೆಯಿಲ್ಲದೇ ಮಾಡಿಕೊಡಬೇಕು. ಜನರನ್ನು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಬೇಕು. ದಿಢೀರ್ ಆಗಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕಾರ್ಯವನ್ನು ಇಲಾಖೆಯಿಂದ ಮಾಡಲಾಗುತ್ತಿದೆ ಎಂದರು.

ಮಂಗಳೂರಿನ ಕಂದಾಯ ಇಲಾಖೆ ತಳಮಟ್ಟದ ಕಚೇರಿಗಳಾದ ಗ್ರಾಮಲೆಕ್ಕಾಧಿಕಾರಿ, ನಾಡಕಚೇರಿ, ತಹಶೀಲ್ದಾರ್, ಉಪನೋಂದಣಿ ಕಚೇರಿಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಅಧಿಕಾರಿಗಳು ಯಾವ ರೀತಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎನ್ನುವುದನ್ನು ಪರಿಶೀಲನೆ ನಡೆಸಲಾಗಿದೆ ಎಂದರು.

2017-18ರಲ್ಲಿ ಪಡೀಲ್ ನಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಕೆಲಸ ಆರಂಭಗೊಂಡಿತ್ತು. 50 ರಿಂದ 55 ಕೋಟಿ ರೂ ವೆಚ್ಚದ ಕಾಮಗಾರಿ ಈಗಾಗಲೇ ನಡೆದಿದೆ. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ, ಜತೆಗೆ ಕಚೇರಿಯೂ ಸ್ಥಳಾಂತರವಾಗಿಲ್ಲ. ಮೊದಲು ಯಾವ ರೀತಿ ಅನುಮೋದನೆ ಮಾಡಲಾಗಿತ್ತೋ ಅದೇ ರೀತಿ ಕಾಮಗಾರಿ ನಡೆದಿದೆ. ಹಿಂದಿನ ಸರಕಾರದ ಕಾಲದಲ್ಲಿ ಕಾಮಗಾರಿ ಮುಗಿಸುವ ಕೆಲಸ ಆಗಿಲ್ಲ. ನಮ್ಮ ಸರಕಾರದ ಅವಧಿಯಲ್ಲಿ ಇದನ್ನು ಪೂರೈಸಲು ಬದ್ಧರಾಗಿದ್ದೇವೆ ಎಂದರು.

ಜಿಲ್ಲಾಧಿಕಾರಿ ಕಚೇರಿ ವರ್ಷದೊಳಗೆ ಸ್ಥಳಾಂತರ ಮಾಡಲು ಕ್ರಮಕೈಗೊಳ್ಳಲಾಗುವುದು. ಉಳ್ಳಾಲ ತಾಲೂಕಿನ ಬಟ್ಟಂಪಾಡಿಯ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ್ದು, ಕಡಲ್ಕೊರೆತದ ಹಾನಿ ಆಗಿರುವ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಉಳ್ಳಾಲ ತಾಲೂಕಿನ ಸೋಮೇಶ್ವರ ಪುರಸಭೆಗೆ ಭೇಟಿ ನೀಡಿ, ಗ್ರಾಮಲೆಕ್ಕಾಧಿಕಾರಿ ಕಚೇರಿ ಕಾರ್ಯಚಟುವಟಿಕೆಗಳ ಬಗ್ಗೆ ಸಚಿವರು ಮಾಹಿತಿ ಪಡೆದರು. ಈ ವೇಳೆ ಗ್ರಾಮಲೆಕ್ಕಾಧಿಕಾರಿ ಲಾವಣ್ಯ ಅವರು ಸಮಗ್ರ ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಕಂದಾಯ ಇಲಾಖೆಯ ಆಯುಕ್ತ ಸುನಿಲ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *