LATEST NEWS
ಪುತ್ತೂರು – ಯುವತಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಿಶ್ವಕರ್ಮ ಸಮಾಜ ಯುವತಿಯ ಕುಟುಂಬದ ಜೊತೆ ನಿಲ್ಲಲಿದೆ

ಪುತ್ತೂರು ಜುಲೈ 23: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮನೆಗೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ. ಪಿ. ನಂಜುಂಡಿ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ನಿಂದ ವಂಚನೆಗೊಳಗಾಗಿರುವ ಯುವತಿ ಮನೆಗೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ. ಪಿ. ನಂಜುಂಡಿ ಭೇಟಿ ನೀಡಿ ಯುವತಿಗೆ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದರು. ಈ ವೇಳೆ ಸಂತ್ರಸ್ತೆ ಹಾಗೂ ಸಂತ್ರಸ್ತೆಯ ತಾಯಿಯೊಂದಿಗೆ ಮಾತನಾಡಿ ಧೈರ್ಯ ತುಂಬಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಇದು ಎರಡು ಹೃದಯಗಳ ನಡುವಿನ ವಿಚಾರ, ಇಬ್ಬರನ್ನ ಒಂದು ಮಾಡೋದು ನಮ್ಮ ಉದ್ದೇಶ. ಹಣ ಬಲ, ರೌಡಿಸಂ ಮೂಲಕ ಬಗೆಹರಿಯುವ ವಿಚಾರ ಇದಲ್ಲ, ಯೌವ್ವನದ ಹುಮ್ಮಸ್ಸಿನಲ್ಲಿ ಇಬ್ಬರ ಕಡೆಯಿಂದಲೂ ತಪ್ಪಾಗಿದೆ. ಎರಡು ಕುಟುಂಬದ ಹೆತ್ತವರು ಕೂತು ಮಾತುಕತೆ ನಡೆಸಿ ಇಬ್ಬರನ್ನೂ ಒಂದಾಗಿಸಬೇಕು ಎಂದರು.

ಹುಡುಗ ಹುಡುಗಿ ಇಬ್ಬರೂ ಲಕ್ಷಣ ವಾಗಿದ್ದಾರೆ ಮಗು ಮುದ್ದುಮುದ್ದಾಗಿದೆ. ಕುಟುಂಬದ ಘನತೆ ಬದಿಗಿಟ್ಟು ಎರಡು ಕುಟುಂಬ ಒಂದಾಗಬೇಕು . ಇಬ್ಬರನ್ನು ಸೇರಿಸಿ ಪುಣ್ಯ ಕಟ್ಟಿಕೊಳ್ಳಬೇಕು ಎಂದರು.
ಒಡೆದು ಹೋದ ಹೃದಯಗಳನ್ನು ಒಂದಾಗಿಸುವ ಪ್ರಯತ್ನ ಮಾಡುತ್ತೇನೆ. ಹುಡುಗ ಜೈಲಲ್ಲಿ ಇದ್ದಾನೆ ಅವನಿಗೆ ಶಿಕ್ಷೆಯಾಗಬೇಕು ಎನ್ನುವ ಉದ್ದೇಶ ನಮಗಿಲ್ಲ. ಇಬ್ಬರು ಒಳ್ಳೆಯದಾಗಿ ಬಾಳಿ ಬದುಕಲಿ ಅನ್ನೋ ಉದ್ದೇಶ ಮಾತ್ರ. ಯುವತಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಿಶ್ವಕರ್ಮ ಸಮಾಜ ಯುವತಿಯ ಕುಟುಂಬದ ಜೊತೆ ನಿಲ್ಲಲಿದೆ. ಯುವಕನ ಕುಟುಂಬದೊಂದಿಗೆ ನಾನು ಮಾತನಾಡಿ ಇಬ್ಬರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತೇನೆ , ಎಲ್ಲವೂ ಸರಿಯಾಗುವ ವಿಶ್ವಾಸ ನನಗಿದೆ ಎಂದರು.