LATEST NEWS
ಕೋಟೆಕಾರು ಬ್ಯಾಂಕ್ ದರೋಡೆ – ಶಶಿ ಥೇವರ್ ಬಚ್ಚಿಟ್ಟಿದ್ದ ಪಿಸ್ತೂಲ್ ಪೊಲೀಸರ ವಶಕ್ಕೆ
ಉಳ್ಳಾಲ ಫೆಬ್ರವರಿ 03: ಕೋಟೆಕಾರು ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಶಶಿ ಥೇವರ್ ಬಚ್ಚಿಟ್ಟಿದ್ದ ಪಿಸ್ತೂಲನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಜ್ಜಿನಡ್ಕ ಬಳಿ ಶಶಿ ಥೇವರ್ ಪಿಸ್ತೂಲು ಬಚ್ಚಿಟ್ಟಿರುವ ವಿಚಾರವನ್ನು ಆರೋಪಿ ಮುರುಗನ್ ಡಿ ಥೇವರ್ ತನಿಖೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಪಿಸ್ತೂಲನ್ನು ಶನಿವಾರ ಶೂಟೌಟ್ ನಡೆದ ಸ್ಥಳದಿಂದ 200 ಮೀಟರ್ ದೂರದಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದರೋಡೆ ಸಂದರ್ಭ ಶಶಿ ಉಪಸ್ಥಿತನಿರದ ಕಾರಣ ಈ ಪಿಸ್ತೂಲನ್ನು ದರೋಡೆಗೆ ಬಳಸಿಲ್ಲ.
ದರೋಡೆಕೋರರ ಬಂಧನದ ಬಳಿಕ ದರೋಡೆಗೆ ಸ್ಕೆಚ್ ರೂಪಿಸಿದ್ದ ಸ್ಥಳೀಯನ ಬಗ್ಗೆ ಮುರುಗಂಡಿ ಪೊಲೀಸರಿಗೆ ತಿಳಿಸಿದ್ದ. ಘಟನೆಗೆ 6 ತಿಂಗಳ ಹಿಂದೆಯೇ ಸ್ಕೆಚ್ ರೂಪಿಸಿದ್ದರೂ ನವೆಂಬರ್‌ನಲ್ಲಿ ಬ್ಯಾಂಕ್ ಪಕ್ಕದ ಪ್ರದೇಶವಾಗಿರುವ ಅಜ್ಜಿನಡ್ಕಕ್ಕೆ ಮುರುಗಂಡಿ ಮತ್ತು ಶಶಿ ಥೇವರ್ ತಂಡ ಆಗಮಿಸಿ ಯೋಜನೆ ರೂಪಿಸಿ ಮುರುಗಂಡಿಗೆ ಪಿಸ್ತೂಲ್ ನೀಡಿತ್ತು. ಇದನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಅಜ್ಜಿನಡ್ಕದ ಪೊದೆಯ ಬಳಿ ಅಡಗಿಸಿಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಶಶಿ ಥೇವರ್ ಸ್ಥಳೀಯ ವ್ಯಕ್ತಿಯಾಗಿರುವ ಸಾಧ್ಯತೆ ಇದ್ದು, ಆತನ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಲೆಮರೆಸಿಕೊಂಡಿರುವ ಆರೋಪಿ ಶಶಿ ಥೇವರ್ ಮುಂಬೈ ನಲ್ಲಿ ಇರುವ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರ ಒಂದು ತಂಡ ಮುಂಬೈಗೆ ತೆರಳಿದೆ. ಈ ದರೋಡೆ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳಿದ್ದು, ಇನ್ನು ಮೂವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.