LATEST NEWS
ಕೋಟೆಕಾರು ಬ್ಯಾಂಕ್ ದರೋಡೆ – ದರೋಡೆ ಮಾಡಿದ್ದ ಎಲ್ಲಾ ಚಿನ್ನ ವಾಪಾಸ್
ಮಂಗಳೂರು ಜನವರಿ 27: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 4 ಮಂದಿ ದರೋಡೆಕೋರರನ್ನು ಅರೆಸ್ಟ್ ಮಾಡಿ ಅವರಿಂದ ಬ್ಯಾಂಕ್ ನಿಂದ ದರೋಡೆ ಮಾಡಿದ್ದ 18 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ದರೋಡೆ ಪ್ರಕರಣದಲ್ಲಿ ದರೋಡೆಯಾಗಿದ್ದ ಬಹುತೇಕ ಚಿನ್ನ ರಿಕವರಿ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ದರೋಡೆ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಆದರೆ ದರೋಡೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
6 ತಿಂಗಳಿಂದ ದರೋಡೆಕೋರರು ಖತರ್ನಾಕ್ ಪ್ಲಾನ್ ರೂಪಿಸಿ ಸಹಕಾರಿ ಬ್ಯಾಂಕ್ನಿಂದ ಚಿನ್ನಾಭರಣಗಳನ್ನು ದೋಚಿದ್ದರು. ಸದ್ಯ ದರೋಡೆಕೋರರು 4 ಬ್ಯಾಗ್ನಲ್ಲಿ ಬಚ್ಚಿಟ್ಟಿದ್ದ 14 ಕೋಟಿ ಮೌಲ್ಯದ 18.314 ಕೆ.ಜಿಯ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಕೃತ್ಯಕ್ಕೆ ಬಳಸಿರುವ ಫಿಯಟ್ ಕಾರು, 2 ಮಚ್ಚುಗಳು, 2 ಪಿಸ್ತೂಲು, 3 ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. ಇನ್ನು ಬಂಧಿತರಿಂದ 3.80 ಲಕ್ಷ ನಗದು ವಶಕ್ಕೆ ತೆಗೆದುಕೊಂಡಿದ್ದಾರೆ
ತಮಿಳುನಾಡಿನ ತಿರುನ್ವೇಲಿಯಲ್ಲಿರುವ ದರೋಡೆಯ ಕಿಂಗ್ಪಿನ್ ಮುರುಗಂಡಿ ಥೇವರ್ನ ಮನೆಯಿಂದ ಈ ಎಲ್ಲ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನವನ್ನು ಬಚ್ಚಿಡುವಲ್ಲಿ ನೆರವಾಗಿರುವ ಹಿನ್ನೆಲೆಯಲ್ಲಿ ಮುರುಗಂಡಿಯ ತಂದೆ ಪ್ರಕರಣದ ನಾಲ್ಕನೇ ಆರೋಪಿ ಷಣ್ಮುಗ ಸುಂದರಂ (65)ನನ್ನು ಕೂಡ ಪೊಲೀಸರು ವಶಕ್ಕೆ ಪಡೆದು ಮಂಗಳೂರಿಗೆ ಕರೆ ತಂದಿದ್ದಾರೆ.
ಈಗಾಗಲೇ ಬಂಧನದಲ್ಲಿರುವ ಆರೋಪಿಗಳ ವಿಚಾರಣೆ ಮುಂದುವರಿದ್ದು, ಇತರ ಆರೋಪಿಗಳನ್ನು ಬಂಧಿಸುವ ನಿಟ್ಟಿ ನಲ್ಲಿಯೂ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ. ಮುಖ್ಯವಾಗಿ ಪ್ರಕರಣದ ಸೂತ್ರಧಾರ ನಾಗಿರುವ ಸ್ಥಳೀಯ ವ್ಯಕ್ತಿಯ ಮೂಲಕವೇ ಇತರರನ್ನು ವಶಕ್ಕೆ ಪಡೆಯಲು ಉದ್ದೇಶಿಸಿದ್ದಾರೆ. ಈಗಾಗಲೇ ಎಲ್ಲ ಕಡೆಗಳಲ್ಲಿ ಜಾಲ ಬೀಸಿದ್ದು, ಕೆಲವೇ ದಿನಗಳಲ್ಲಿ ಉಳಿದ ಆರೋಪಿಗಳನ್ನೂ ಬಂಧಿಸಲಾಗುವುದು ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಪೊಲೀಸರು.
ಮಂಗಳೂರಿನ ಉಳ್ಳಾಲ ತಾಲೂಕಿನ ಕೆಸಿ. ರೋಡ್ ಜಂಕ್ಷನ್ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ಜನವರಿ 17ರಂದು ದರೋಡೆ ನಡೆದಿತ್ತು. ಈ ಪ್ರಕರಣ ಸಂಬಂಧ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪದ್ಮನೇರಿ ಗ್ರಾಮದಲ್ಲಿ ಮುಂಬೈನ ಚೆಂಬೂರ್ ತಿಲಕ ನಗರದ ಕಣ್ಣನ್ ಮಣಿ (36), ಪದ್ಮನೇರಿ ಗ್ರಾಮದ ಮುರುಗುಂಡಿ ಥೇವರ್ (36), ಮುಂಬೈನ ದೊಂಬಿವಲಿ ವೆಸ್ಟ್ನ ಯೊಸುವಾ ರಾಜೇಂದ್ರನ್ (35), ಷಣ್ಣುಗ ಸುಂದರಂ ಎಂಬುವರನ್ನು ಬಂಧಿಸಲಾಗಿದೆ.
ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಹಾಗೂ ಪಿಸ್ತೂಲು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮುಂಬೈಯ ಪದ್ಮನೇರಿ ಗ್ರಾಮದ ಮುರುಗುಂಡಿ ಥೇವರ್ (36), ದೊಂಬಿವಲಿ ವೆಸ್ಟ್ನ ಯೊಸುವಾ ರಾಜೇಂದ್ರನ್ (35), ಕಣ್ಣನ್ ಮಣಿ, ಷಣ್ಣುಗ ಸುಂದರಂ ಎಂಬುವರನ್ನು ಅರೆಸ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಬ್ಯಾಂಕ್ನಲ್ಲಿ ದರೋಡೆ ನಡೆಸಿದ ನಂತರ ಮುರುಗಂಡಿ ಥೇವರ್ ಹಾಗೂ ಯೊಸುವಾ ರಾಜೇಂದ್ರನ್ ಫಿಯಟ್ ಕಾರಿನಲ್ಲಿ ತಲಪಾಡಿ ಗೇಟಿನಿಂದ ಕೇರಳ ಕಡೆಗೆ ಕಡೆಗೆ ಪರಾರಿಯಾಗಿದ್ದರು. ಉಳಿದ 4 ಆರೋಪಿತರು ಮಂಗಳೂರು ರೈಲು ನಿಲ್ದಾಣಕ್ಕೆ ತೆರಳಿದ್ದರು. ಇವರಲ್ಲಿ ಮೂವರು ಆಟೋದಲ್ಲಿ ಮತ್ತು ಒಬ್ಬನು ಬಸ್ಸಿನಲ್ಲಿ ಪ್ರಯಾಣಿಸಿ ಎಸ್ಕೇಪ್ ಆಗಿದ್ದರು. ಮುರುಗಂಡಿ ಮತ್ತು ತಂಡ ತಮಿಳುನಾಡಿಗೆ ಪರಾರಿಯಾಗಲು ಯೋಜಿಸಿದ್ದರು. ಅಲ್ಲದೇ ಇಲ್ಲಿ ದೋಚಿದ್ದ ಬಂಗಾರದ ಆಭರಣಗಳನ್ನು ಮುಂಬೈನ ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ಲಾನ ನ ಲ್ಲಿ ಈ ಧಾರಾವಿ ಗ್ಯಾಂಗ್ ಇತ್ತು ಎಂದು ಹೇಳಿದ್ದಾರೆ.
ಬ್ಯಾಂಕ್ ನ ಲೋಪದೋಷಗಳನ್ನು ದರೋಡೆಕೋರರು ಸರಿಯಾಗಿ ಬಳಸಿಕೊಂಡು ಅತಿ ದೋಡ್ಡ ದರೋಡೆ ಮಾಡಿದ್ದಾರೆ. ಆದರೆ ಮಂಗಳೂರು ಪೊಲೀಸರು ಕಾರ್ಯಾಚರಣೆ ದರೋಡೆಯಾದ ಎಲ್ಲಾ ಚಿನ್ನ ಮತ್ತೆ ಮರಳಿ ಸಿಗುವಂತಾಗಿದೆ.