LATEST NEWS
ಕೋಟೆಕಾರು ಬ್ಯಾಂಕ್ ದರೋಡೆ ‘ಧಾರಾವಿ ಟೀಂ’ನ ಒಳಜಗಳವೇ ಮುಳುವಾಯ್ತಾ?
ಮಂಗಳೂರು ಜನವರಿ 21: ಉಳ್ಳಾಲದ ಕೋಟೆಕಾರು ಸಹಕಾರಿ ಬ್ಯಾಂಕ್ನಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಕ್ಕಾ ಪ್ಲ್ಯಾನ್ ಮಾಡಿ ದರೋಡೆ ಮಾಡಿದ್ದ ದರೋಡೆಕೋರರು ಸಿಕ್ಕಿ ಬೀಳಲು ಪ್ರಮುಖ ಕಾರಣವಾಗಿದ್ದೆ ಅವರ ನಡುವೆ ಇದ್ದ ಒಳಜಗಳ ಎನ್ನುವುದು ತನಿಖೆಯಿಂದ ಬಯಲಾಗಿದೆ.
ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಕೆ.ಸಿ. ರೋಡ್ ಶಾಖೆಯಲ್ಲಿ ಜನವರಿ 17ರಂದು ನಡೆದ ದರೋಡೆ ಪ್ರಕರಣ ನಡೆದಿತ್ತು. ಸುಮಾರು 4 ಕೋಟಿ ಮೌಲ್ಯದ ಚಿನ್ನಾಭರಣಗಳೊಂದಿಗೆ ದರೋಡೆಕೋರರು ಪರಾರಿಯಾಗಿದ್ದರು. ಆರೋಪಿಗಳು ಚಿನ್ನವನ್ನು ಗೋಣಿ ಚೀಲದಲ್ಲಿ ತುಂಬಿಸಿ 700 ಕಿ.ಮೀ ಕಾರಿನಲ್ಲೇ ಪ್ರಯಾಣಿಸಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಮಂಗಳೂರಿನಿಂದ ಫಿಯೇಟ್ ಕಾರಿನಲ್ಲಿ ಪರಾರಿಯಾಗಿದ್ದ ದರೋಡೆಕೋರರು ತಮಿಳುನಾಡಿನ ತಿರುನಲ್ವೇಲಿಗೆ ಪ್ರಯಾಣಿಸಿದ್ದರು. ತಮಿಳುನಾಡು ತಲುಪಿದ ಬಳಿಕ ಅಜ್ಞಾತ ಸ್ಥಳದಲ್ಲಿ ಕಾರು ಬಿಟ್ಟು ಚಿನ್ನದ ಜೊತೆ ಪರಾರಿಯಾಗಿದ್ದರು.
ಪ್ರಕರಣದ ತನಿಖೆ ಆರೋಪಿಸಿದ ಪೊಲೀಸರು ತಿರುನಲ್ವೇಲಿ ಜಿಲ್ಲೆಯ ಪದ್ಮನೇರಿ ಗ್ರಾಮದ ಅಮ್ಮಕೋವಿಲ್ ನಿವಾಸಿ ಮುರುಗಂಡಿ ಥೇವರ್ (36)ನನ್ನು ಆತನ ಮನೆಯಿಂದ ವಶಕ್ಕೆ ಪಡೆಯಲಾಗಿದೆ. ಮುಂಬಯಿಯ ಡೊಂಬಿವಿಲಿ ಪಶ್ಚಿಮ ಗೋಪಿನಾಥ್ ಚೌಕ್ ರಾಮ್ಕಾಭಾಯಿ ನಿವಾಸಿ ಯೋಸುವಾ ರಾಜೇಂದ್ರನ್ (35) ಮತ್ತು ಮುಂಬಯಿ ಚೆಂಬೂರು ತಿಲಕ್‌ನಗರ ನಿವಾಸಿ ಕಣ್ಣನ್ ಮಣಿ (36) ಬಂಧಿತ ಇನ್ನಿಬ್ಬರು ಆರೋಪಿಗಳು. ತಿರುನಲ್ವೇಲಿಯ ಬೇರೆ ಬೇರೆ ಸ್ಥಳಗಳಿಂದ ಈ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಯಾವುದೇ ಸುಳಿವು ಇಲ್ಲದೆ ಪರಾರಿಯಾಗಿದ್ದ ದರೋಡೆಕೋರರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗಲು ಕಾರಣವಾಗಿದ್ದೇ ಅವರ ನಡುವೆ ಇದ್ದ ಒಳಜಗಳ, ಹೌದು ಈ ದರೋಡೆಕೋರರ ತಂಡದಿಂದ ಕೊನೆ ಕ್ಷಣದಲ್ಲಿ ಹೊರಗಿಡಲಾಗಿದ್ದ ಸದಸ್ಯರಿಂದ ಸಿಕ್ಕ ರಹಸ್ಯ ಮಾಹಿತಿ ಪೊಲೀಸರಿಗೆ ಕಳ್ಳರನ್ನು ಹಿಡಿಯಲು ಸಹಕಾರಿಯಾಗಿತ್ತು.
ಕೋಟೆಕಾರು ಬ್ಯಾಂಕ್ ದರೋಡೆಗೆ ಗ್ಯಾಂಗ್ ಮುಂಬೈನಲ್ಲಿ ಕುಳಿತು ಸ್ಕೆಚ್ ಮಾಡಿದ್ರು, ದರೋಡೆ ಯೋಜನೆಯನ್ನು ಸುಮಾರು ಹತ್ತು ಮಂದಿ ರೂಪಿಸಿದ್ದರು. ಇವರಲ್ಲಿ ಆರು ಮಂದಿ ಕಾರ್ಯಾಚರಣೆಗೆ ಇಳಿದಿದ್ದರೆ, ಉಳಿದವರು ಮುಂಬಯಿಯಲ್ಲೇ ದರೋಡೆಯ ಅನಂತರದ ಯೋಜನೆ ರೂಪಿಸುತ್ತಿದ್ದರು. ಈ ಪೈಕಿ ಕೆ.ಸಿ.ರೋಡ್‌ನಲ್ಲಿನ ಬ್ಯಾಂಕ್‌ನ ಬಗ್ಗೆ ಸಮಗ್ರ ಮಾಹಿತಿ ಹೊಂದಿದ್ದವರನ್ನೂ ಒಳಗೊಂಡ ತಂಡ ಮುಂಬಯಿಯಲ್ಲಿ ಕುಳಿತು ಇಡೀ ದರೋಡೆಗೆ ಸಂಚು ರೂಪಿಸಿತ್ತು. ಕಾರ್ಯಾಚರಣೆಯ ತಂಡ, ವಿಧಾನ ಹಾಗೂ ದಿನ, ಹೊತ್ತು ಎಲ್ಲವನ್ನೂ ಅಂತಿಮಗೊಳಿಸಲಾಗಿತ್ತು. ಆದರೆ ಈ ತಂಡದಲ್ಲಿದ್ದ ಒಬ್ಬಿಬ್ಬರನ್ನು ಕಾರ್ಯಾಚರಣೆಗೆ ಮುನ್ನ ಈ ಯೋಜನೆಯಿಂದ ಹೊರಗಿಡಲಾಗಿತ್ತು. ಬಳಿಕ ದರೋಡೆಯ ಮೌಲ್ಯ, ಪಾಲು ಹಂಚಿಕೆ ಎಲ್ಲವೂ ಆಗಿತ್ತು. ಹಾಗಾಗಿ ಈ ಹೊರಗಿದ್ದವರಿಗೆ ಈ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ, ಯಾವುದೋ ದೊಡ್ಡ ದರೋಡೆ ಎಂಬುದು ಖಚಿತವಾಗಿತ್ತು. ಯಾವಾಗ ಇಂಥ ಯೋಜನೆಯಿಂದ ಹೊರಗಿಟ್ಟರೋ, ಆ ಇಬ್ಬರಲ್ಲಿ ಒಬ್ಬ ಉನ್ನತ ಪೊಲೀಸ್ ಅಧಿಕಾರಿಯೊಬ್ಬರಿಗೆ ಕ್ಲೂ ಕಳುಹಿಸಿದ್ದ. ಈ ಧಾರಾವಿ ತಂಡದ ಬಗ್ಗೆ ಸಿಕ್ಕ ಮಾಹಿತಿಗೂ, ಕಾರಿನ ಮೂಲದ ಜಾಡು ಧಾರಾವಿ ತಲುಪಿದ್ದಕ್ಕೂ ಸರಿ ಹೊಂದಿತ್ತು.
ಆದರೆ ದರೋಡೆ ನಡೆಯುತ್ತದೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಮಹಾರಾಷ್ಟ್ರ ಪೊಲೀಸರು ಅಲರ್ಟ್ ಆಗಿದ್ದರು. ಯಾವುದಕ್ಕೂ ಇರಲಿ ದರೋಡೆಕೋರರು ಮನೆಗೆ ಬರಬಹುದೆಂದು ಅವರ ಮನೆಗೆ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲಿನ ಪ್ರತೀ ಚಲನವಲನಗಳನ್ನೂ ಉನ್ನತ ಅಧಿಕಾರಿಗಳ ತಂಡ ಗಮನಿಸುತ್ತಿತ್ತು. ಆದರೆ ಆರೋಪಿಗಳಾರೂ ಅತ್ತ ಕಡೆಗೆ ಬರಲೇ ಇಲ್ಲ. ಇದು ಪೊಲೀಸರಿಗೆ ಕೃತ್ಯ ನಡೆದಿರುವ ಸಾಧ್ಯತೆಯನ್ನು ಖಚಿತಗೊಳಿಸಿತು. ಅದೇ ಸಮಯಕ್ಕೆ ಕರ್ನಾಟಕದಲ್ಲಿನ ದರೋಡೆ ಕೃತ್ಯ ಹಾಗೂ ಪೊಲೀಸ್ ಇಲಾಖೆ ಸಮನ್ವಯ ಕೋರಿದ್ದು-ಎಲ್ಲವೂ ಆರೋಪಿಗಳ ಪತ್ತೆಗೆ ಅನುಕೂಲ ಕಲ್ಪಿಸಿತು.
ಪರಸ್ಪರ ಎರಡು ರಾಜ್ಯಗಳ ನಡುವೆ ಅಮೂಲ್ಯ ಮಾಹಿತಿ ರವಾನೆಯಾಗುತ್ತಿದ್ದಂತೆ ಮಂಗಳೂರು ಪೊಲೀಸರು ತಮಿಳುನಾಡಿನ ತಿರುನ್ವೇಲಿಗೆ ತಂಡವನ್ನು ಕಳುಹಿಸಿದರು. ಆದರೆ ತಮಿಳುನಾಡಿನಲ್ಲಿ ಆರೋಪಿಗಳ ಬಂಧನವಾಗುವವರೆಗೂ ಧಾರಾವಿ ಮನೆ ಎದುರು ಪೊಲೀಸರ ಮಫ್ತಿ ಕಾವಲು ಮುಂದುವರಿದಿತ್ತು. ತಮಿಳುನಾಡಿನಲ್ಲಿ ಕಾರು ಸಿಕ್ಕ ಬೆನ್ನಲ್ಲೇ ಧಾರಾವಿ ಗ್ಯಾಂಗ್ ದರೋಡೆ ಪ್ಲಾನ್ ಬಯಲಾಗಿತ್ತು.
ಈ ದರೋಡೆ ಸಂಚು ರೂಪಿಸಿದ ತಂಡದಲ್ಲಿ ಸುಮಾರು ಹತ್ತು ಮಂದಿ ಇದ್ದರು. ಮೂವರು ಸಿಕ್ಕಿಬಿದ್ದಿದ್ದರೂ ಇನ್ನೂ ಸುಮಾರು 7 ಮಂದಿ ತಲೆ ಮರೆಸಿಕೊಂಡಿದ್ದಾರೆ. ಈಗಾಗಲೇ ಬಂಧಿತರಲ್ಲದೇ, ಮತ್ತಿಬ್ಬರ ಮಾಹಿತಿಯನ್ನೂ ಪೊಲೀಸರು ಕಲೆ ಹಾಕಿದ್ದಾರೆ. ಬಂಧಿತರ ವಿಚಾರಣೆ ಉಳಿದವರ ಬಗ್ಗಯೂ ಬೆಳಕು ಚೆಲ್ಲುವ ಸಾಧ್ಯತೆ ಇದೆ. ಜತೆಗೆ ಪೊಲೀಸ್ ಆಯುಕ್ತರೂ ಹೇಳಿದಂತೆ ಸ್ಥಳೀಯರ ಸಹಕಾರವಿಲ್ಲದೇ ಇಂಥ ಕೃತ್ಯ ಎಸಗಿರುವ ಸಾಧ್ಯತೆ ಕಡಿಮೆ. ಪೊಲೀಸರು ಈ ಲೋಕಲ್ ಲಿಂಕ್‌ನ ಮಾಹಿತಿಯ ಶೋಧದಲ್ಲಿದ್ದಾರೆ.