LATEST NEWS
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ – ತನಿಖೆಗೆ 8 ತಂಡ – ಸ್ಥಳೀಯರ ಕೈವಾಡ ಶಂಕೆ
ಮಂಗಳೂರು ಜನವರಿ 19: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ತನಿಖೆಗೆ 8 ತಂಡಗಳನ್ನು ರಚಿಸಲಾಗಿದ್ದು, ಪ್ರಕರಣದಲ್ಲಿ ಸ್ಥಳೀಯರು ಹಾಗೂ ಹೊರ ರಾಜ್ಯದವರ ಲಿಂಕ್ ಇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೋಟೆಕಾರು ಸಹಕಾರಿ ಬ್ಯಾಂಕ್‌ನಲ್ಲಿ ಶುಕ್ರವಾರ ಮಧ್ಯಾಹ್ನ ಕೃತ್ಯ ನಡೆದಿದ್ದು, 5 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳೊಂದಿಗೆ ದರೋಡೆಕೋರರು ಪರಾರಿಯಾಗಿದ್ದಾರೆ. ದರೋಡೆಕೋರರು ಪಕ್ಕಾ ಪ್ಲ್ಯಾನ್ ಮಾಡಿ ಪರಾರಿಯಾಗಿದ್ದು, ಪೊಲೀಸರು ಇದೀಗ ದರೋಡೆಕೊರರ ಬೆನ್ನ ಹಿಂದೆ ಬಿದ್ದಿದ್ದಾರೆ.
ದರೋಡೆ ಕೃತ್ಯದ ತನಿಖೆಗೆ ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ 8 ತಂಡಗಳನ್ನು ರಚಿಸಲಾಗಿದ್ದು, ಕೆಲವೊಂದು ಮಾಹಿತಿ ಹಿನ್ನೆಲೆಯಲ್ಲಿ 3 ಕ್ಕೂ ಅಧಿಕ ತಂಡಗಳು ಹೊರರಾಜ್ಯಕ್ಕೆ ತೆರಳಿವೆ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಹೊರ ರಾಜ್ಯದ ಲಿಂಕ್ ಹೆಚ್ಚಿರುವ ಕಾರಣ ತನಿಖಾ ತಂಡಗಳನ್ನು 5 ರಿಂದ 8 ಕ್ಕೆ ಹೆಚ್ಚಿಸಲಾಗಿದೆ.
ದರೋಡೆ ಕೃತ್ಯ ನಡೆದ ಸಮಯ, ನಡೆದ ರೀತಿ, ದರೋಡೆಕೋರರು ಪರಾರಿಯಾದ ರೀತಿ, ದರೋಡೆಕೋರರ ಸಂವಹನ ಸೇರಿದಂತೆ ಪ್ರತಿಯೊಂದರ ಬಗ್ಗೆ ತನಿಖಾ ತಂಡಗಳು ಮಾಹಿತಿ ಹಾಕಿದ್ದು, ಈ ಕೃತ್ಯದಲ್ಲಿಸ್ಥಳೀಯರಿರುವುದು ಪಕ್ಕಾ ಎಂಬುದನ್ನು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಈ ಹಿನ್ನೆಲೆಯಲ್ಲಿ ಘಟನೆ ನಡೆದ ಬಳಿಕ ಮೂವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಘಟನೆಗೆ ಸಂಬಂಧಿಸಿ ಮತ್ತಷ್ಟು ಸೂಕ್ಷ್ಮ ಮಾಹಿತಿಗಳು ಪೊಲೀಸರಿಗೆ ಲಭಿಸಿವೆ ಎಂದು ಮೂಲಗಳು ತಿಳಿಸಿವೆ.