LATEST NEWS
ಕೊಂಕಣ್ ರೈಲ್ವೆ ವಿಲೀನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವಿರತ ಪ್ರಯತ್ನ

ಉಡುಪಿ ಮಾರ್ಚ್ 18: ನಷ್ಟದಲ್ಲಿರುವ ಕೊಂಕಣ್ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೋರಾಟ ನಡೆಸುತ್ತಿದ್ದಾರೆ. ಈ ಪ್ರಕ್ರಿಯೆಗಾಗಿ ಕೇಂದ್ರ ರೈಲ್ವೆ ಸಚಿವರಲ್ಲದೇ ರಾಜ್ಯದ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಭಾರೀ ನಷ್ಟದಲ್ಲಿರುವ ಕೊಂಕಣ್ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಿದರೆ ಕೊಂಕಣ್ ರೈಲ್ವೆ ಮೂಲಭೂತ ಸೌಕರ್ಯ ಅಭಿವೃದ್ದಿಯಾಗಲಿದೆ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಇದೀಗ ಕೊಂಕಣ್ ರೈಲ್ವೆ ವಿಲೀನಕ್ಕೆ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಕೇಂದ್ರ ರೈಲ್ವೆ ಸಚಿವರೊಂದಿಗೆ ಮಾತುಕತೆ ನಡೆಸಿರುವ ಕೋಟ, ರಾಜ್ಯ ಸರಕಾರದ ಒಪ್ಪಿಗೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕು ಎಂಬ ಬಗ್ಗೆ ವರ್ಷಗಳಿಂದ ನಡೆಯುತ್ತಿರುವ ಚರ್ಚೆ ಇತ್ತೀಚೆಗೆ ತೀವ್ರತೆ ಪಡೆದುಕೊಂಡಿದೆ. ಈ ವಿಷಯವನ್ನು ಕೇಂದ್ರ ರೈಲ್ವೇ ಸಚಿವರ ಗಮನಕ್ಕೂ ತರಲಾಗಿತ್ತು. ಈಗ ರಾಜ್ಯ ಸರಕಾರದ ಅನುಮತಿಗಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ನಿಯೋಗವು ಬೆಂಗಳೂರಿನಲ್ಲಿ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಹಲವು ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯಿತು.

ಮಾತುಕತೆ ಬಳಿಕ ವಿಲೀನಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ಪಾಟೀಲ್, ತತ್‌ಕ್ಷಣವೇ ಇಲಾಖಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಅವರಿಗೆ ಕಡತ ಸಿದ್ಧಪಡಿಸಲು ಸೂಚಿಸಿದರು. ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಪೂರಕ ಕ್ರಮ ಕೈಗೊಳ್ಳುವ ಬಗ್ಗೆ ಸಂಸದರ ನಿಯೋಗಕ್ಕೆ ಭರವಸೆ ನೀಡಿದರು.
ಉಡುಪಿ ಜಿಲ್ಲೆಯ ಶಾಸಕರಾದ ವಿ.ಸುನಿಲ್ ಕುಮಾರ್, ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಮೊದಲಾದವರು ನಿಯೋಗದಲ್ಲಿದ್ದರು. ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಕ್ಕಾಗಿ ರೈಲ್ವೇ ಸಚಿವರಿಗೆ ಪತ್ರದ ಮೂಲಕ ಕೋರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ. ದೇಶದ ಎಲ್ಲ ರೈಲು ಹಳಿಗಳ ಅಭಿವೃದ್ಧಿಗೂ ಕೇಂದ್ರ ಸರಕಾರದ ಅನುದಾನ ಸಿಗಲಿದೆ. ಆದರೆ ಮಂಗಳೂರು ಮುಂಬಯಿ ಕೊಂಕಣ ಮಾರ್ಗ ಮಾತ್ರ ಪ್ರತ್ಯೇಕ ನಿಗಮದಲ್ಲಿರುವುದರಿಂದ ಇದನ್ನು ವಿಲೀನಗೊಳಿಸುವುದರಿಂದ ಇನ್ನಷ್ಟು ಅಭಿವೃದ್ಧಿ ಕಾಣಲು ಸಾಧ್ಯ. ಒಪ್ಪಂದದಂತೆ 10 ವರ್ಷಗಳಲ್ಲೇ ವಿಲೀನ ಆಗಬೇಕಿತ್ತು. ಇನ್ನೂ ಆಗಿಲ್ಲ. ಹೀಗಾಗಿ ಗೋವಾ ಸರಕಾರದಂತೆ ಕರ್ನಾಟಕ ಸರಕಾರವೂ ತನ್ನ ಪಾಲನ್ನು ಕೇಂದ್ರಕ್ಕೆ ಹಸ್ತಾಂತರಿಸಿದರೆ ಕರಾವಳಿ ಭಾಗದಲ್ಲೂ ರೈಲು ಹಳಿಗಳ ಅಭಿವೃದ್ಧಿ ಸಾಧ್ಯ ಎಂದು ಮನವಿಯಲ್ಲಿ ಕೋರಿದ್ದಾರೆ.