UDUPI
ರಾಜ್ಯ ಸರ್ಕಾರ ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸಲಿ,ನಂತರ ಬಜೆಟನ್ನು ಟೀಕಿಸಲಿ-ವಿಪಕ್ಷದ ಕಿವಿ ಹಿಂಡಿದ ಸಂಸದ ಕೋಟ
ಉಡುಪಿ ಪೆಬ್ರವರಿ 02: ಕೇಂದ್ರ ವಿತ್ತ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಮಂಡಿಸಿದ ಬಜೆಟ್ ಬಗ್ಗೆ ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳು ಟೀಕಿಸುವುದು ಹೊಸದಲ್ಲ. ಆದರೆ ಇಂತಹ ಅದ್ಭುತ ಬಜೆಟ್ ನಲ್ಲಿ ರಾಜ್ಯಕ್ಕೆ ಅಥವಾ ದೇಶಕ್ಕೆ ಯಾವ ವಿಚಾರದಲ್ಲಿ ತೊಡಕುಂಟಾಗಿದೆ ಎಂಬುದನ್ನು ಕಾಂಗ್ರೆಸ್ ಪಕ್ಷವು ಸ್ಪಷ್ಟಪಡಿಸಲಿ. ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಸಹಕರಿಸಲಿ ಎಂದು ಲೋಕಸಭಾ ಸಚೇತಕರು ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ವಿರೋಧಪಕ್ಷಗಳಿಗೆ ಚಾಟಿ ಬೀಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರದ ಯೋಜನೆಗಳನ್ನು ತಡೆ ಹಿಡಿಯುವಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತಿರುವುದು ನಮ್ಮ ಗಮನದಲ್ಲಿದೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರವು 6000 ನೀಡಿದರೆ ಈ ಹಿಂದಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿ 4000 ನೀಡಿತ್ತು. ಒಟ್ಟು 10,000 ರೂಪಾಯಿ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ರೈತರ ಕೈ ಸೇರುತ್ತಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮರುದಿನವೇ 4000 ರೂಪಾಯಿ ರೈತರಿಗೆ ನೀಡುತ್ತಿದ್ದ ಯೋಜನೆಯನ್ನು ರದ್ದುಗೊಳಿಸಿತ್ತು. ಈ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದು ರಾಜ್ಯ ಕಾಂಗ್ರೆಸ್ ಅಲ್ಲವೇ? ಎಂದು ಸಂಸದರು ಪ್ರಶ್ನಿಸಿದ್ದಾರೆ.
ಕುಶಲ ಕರ್ಮಿಗಳಿಗೆ ಉಪಯೋಗವಾಗುವಂತಹ ವಿಶ್ವಕರ್ಮ ಯೋಜನೆ ಆಗಿರಬಹುದು, ಮುದ್ರಾ ಯೋಜನೆ ಆಗಿರಬಹುದು ಅಥವಾ ಆಯುಷ್ಮಾನ್ ಯೋಜನೆಗಳನ್ನು ಕೂಡಾ ಪರಿಣಾಮಕಾರಿ ಬಳಕೆ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಉದಾಸೀನ ತೋರುತ್ತಿರುವುದು ರಾಜ್ಯದ ಜನತೆಗೆ ಗೊತ್ತಿಲ್ಲದೇನಲ್ಲ. ಇಂತಹ ಉತ್ತಮ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಸರ್ಕಾರವು ಕೆಲಸ ಮಾಡುವುದನ್ನು ಬಿಟ್ಟು ಜನರಿಗೆ ಕೇವಲ ರಾಜಕೀಯ ದ್ವೇಷಕ್ಕಾಗಿ ಜನರಿಗೆ ಮೋಸ ಮಾಡುವುದು ಎಷ್ಟು ಸರಿ? ಮೊದಲು ರಾಜ್ಯ ಸರ್ಕಾರವು ತಮ್ಮಲ್ಲಿ ಆಗುವಂತಹ ಲೋಪ ದೋಷಗಳನ್ನು ಸರಿಪಡಿಸಿಕೊಂಡು ನಂತರ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡಲಿ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು.