KARNATAKA
ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಎಂದಿದ್ದಕ್ಕೆ ತಂಗಿಯನ್ನೇ ಕೊಚ್ಚಿ ಕೊಲೆಗೈದ ಅಣ್ಣ
ಚಾಮರಾಜನಗರ ಜನವರಿ 02: ಜ್ವರ ಬಂದ ಪುಟ್ಟ ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಎಂದಿದ್ದಕ್ಕೆ ತನ್ನ ತಂಗಿಯನ್ನೇ ಅಣ್ಣ ಕೊಲೆ ಮಾಡಿದ ಘಟನೆ ಕೊಳ್ಳೇಗಾಲದ ಈದ್ಗಾ ಮೊಹಲ್ಲಾದಲ್ಲಿ ಬುಧವಾರ ನಡೆದಿದೆ. ಚಾಕು ಇರಿತಕ್ಕೊಳಗಾದ ಐಮಾನ್ ಬಾನು(26) ಸ್ಥಳದಲ್ಲೇ ಮೃತಪಟ್ಟರೆ, ಸೈಯದ್(60) ಮತ್ತು ತಸ್ಲಿಮಾ ತಾಜ್(25) ಗಂಭೀರವಾಗಿ ಗಾಯಗೊಂಡು ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜ್ವರ ಬಂದಿದ್ದ ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಎಂದಿದ್ದೇ ಕಲಹಕ್ಕೆ ಕಾರಣ. ಇದರಿಂದ ಕೋಪಗೊಂಡ ವ್ಯಕ್ತಿ ಎಲ್ಲರಿಗೂ ಚಾಕುವಿನಿಂದ ಇರಿದಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಚಾಕು ಇರಿದ ಫರ್ಮಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಫರ್ಮಾನ್ ತನ್ನ ಅಣ್ಣನ ಮಗಳಿಗೆ ಸೌತೆಕಾಯಿ ತಿನ್ನಿಸುತ್ತಿದ್ದಾಗ ಸಹೋದರಿ ಐಮಾನ್ ಬಾನು, ಜ್ವರ ಬಂದಿರುವ ಮಗುವಿಗೆ ಸೌತೆಕಾಯಿ ಏಕೆ ತಿನ್ನಿಸುತ್ತಿದ್ದಿಯಾ ಎಂದು ಪ್ರಶ್ನಿಸಿದ್ದಾರೆ. ನಂತರ ಮಾತಿಗೆ ಮಾತು ಬೆಳೆದು ಐಮಾನ್ ಅವರಿಗೆ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ಬಳಿಕ, ತಂದೆ ಸೈಯದ್ ಮತ್ತು ಅತ್ತಿಗೆಗೂ ಇರಿದಿದ್ದಾನೆ. ಗಲಾಟೆಯಲ್ಲಿ ಸೈಯದ್ ಅವರ ಕೈ ಕೂಡಾ ಮುರಿದಿದೆ.