DAKSHINA KANNADA
ಪೋಲೀಸರ ಹತ್ಯೆಗೈದ ಆರೋಪಿ ಪೋಲೀಸರ ಗುಂಡಿಗೆ ಬಲಿ

ಪೋಲೀಸರ ಹತ್ಯೆಗೈದ ಆರೋಪಿ ಪೋಲೀಸರ ಗುಂಡಿಗೆ ಬಲಿ
ಕಾನ್ಪುರ,ಜುಲೈ 10: ಉತ್ತರಪ್ರದೇಶದ 8 ಪೋಲೀಸರನ್ನು ಹತ್ಯೆಗೈದ ಪ್ರಮುಖ ಆರೋಪಿ ರೌಡಿ ಶೀಟರ್ ವಿಕಾಸ್ ದುಬೆ ಪೋಲೀಸ್ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ.
ಕೊಲೆಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಕಾನ್ಪುರ ಪೋಲೀಸರು ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ವಿಕಾಸ್ ದುಬೆ ಹಾಗೂ ಆತನ ತಂಡ ಪೋಲೀಸರ ಮೇಲೆ ಗುಂಡಿನ ಮಳೆಗರೆದಿತ್ತು. ಇದರಿಂದ 8 ಪೋಲೀಸರು ಸ್ಥಳದಲ್ಲೇ ಮೃತಪಟ್ಟಿದ್ದರೆ,7 ಮಂದಿ ಗಾಯಗೊಂಡಿದ್ದರು.

ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ವಿಕಾಸ್ ದುಬೆಯನ್ನು ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲ ಮಂದಿರದಲ್ಲಿ ದೇವಸ್ಥಾನದ ಸೆಕ್ಯೂರಿಟಿ ಗಾರ್ಡ್ ಪತ್ತೆಹಚ್ಚಿ ಪೋಲೀಸರಿಗೆ ಮಾಹಿತಿ ನೀಡಿದ್ದ. ಈ ಹಿನ್ನಲೆಯಲ್ಲಿ ಮಧ್ಯಪ್ರದೇಶ ಪೋಲೀಸರು ಆತನನ್ನು ಬಂಧಿಸಿದ್ದರು. ಈ ನಡುವೆ ಪೋಲೀಸರ ಹತ್ಯೆಗೆ ಸಂಬಂಧಿಸಿದಂತೆ ಹೆಚ್ಚಿ ತನಿಖೆಗಾಗಿ ವಿಕಾಸ್ ದುಬೆಯನ್ನು ಉಜ್ಜಯಿನಿಯಿಂದ ಕಾನ್ಪುರಕ್ಕೆ ಕರೆತರುವ ಮಧ್ಯೆ ಆರೋಪಿ ಪೋಲೀಸ್ ವಶದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದ ಎನ್ನಲಾಗಿದೆ. ಅಲ್ಲದೆ ಪೋಲೀಸರ ಪಿಸ್ತೂಲ್ ಕಸಿದುಕೊಳ್ಳುವ ಪ್ರಯತ್ನವನ್ನೂ ಮಾಡಿದ್ದು, ಈ ಸಂದರ್ಭದಲ್ಲಿ ಪೋಲೀಸರು ವಿಕಾಸ್ ದುಬೆ ಮೇಲೆ ಗುಂಡು ಹಾರಿಸಿದ್ದಾರೆ. ಆಸ್ಪತ್ರೆಗೆ ಸೇರಿಸುವ ಮಧ್ಯೆಯೇ ವಿಕಾಸ್ ದುಬೆ ಸಾವನ್ನಪ್ಪಿದ್ದಾನೆ.
ಈ ನಡುವೆ ಪೋಲೀಸ್ ಎನ್ ಕೌಂಟರ್ ಗೆ ರಾಜಕೀಯ ಮುಖಂಡರು ಸೇರಿದಂತೆ ವಿವಿಧ ಕಡೆಗಳಿಂದ ಭಾರೀ ವಿರೋಧವೂ ಕೇಳಿ ಬರಲಾರಂಭಿಸಿದೆ. ಇದೊಂದು ನಕಲಿ ಎನ್ ಕೌಂಟರ್ ಎನ್ನುವ ಆರೋಪವೂ ಇದೀಗ ಉತ್ತರಪ್ರದೇಶ ಪೋಲೀಸರ ಮೇಲೆ ಹೆಚ್ಚಾಗಲಾರಂಭಿಸಿದೆ. ವಿಕಾಸ್ ದುಬೆ ಹಲವು ರಾಜಕೀಯ ನಾಯಕರ ಜೊತೆ ಸ್ನೇಹ ಸಂಬಂಧವನ್ನು ಹೊಂದಿದ್ದು, ಈ ಸಂಬಂಧ ಆತನ ಡೈರಿಯೊಂದು ಪೋಲೀಸರ ಕೈಗೆ ದೊರೆತಿದೆ. ಈ ಡೈರಿಯಲ್ಲಿ ಹಲವು ವಿಚಾರಗಳೂ ಅಡಗಿರುವ ಸಾಧ್ಯತೆಯಿದ್ದು, ಆರೋಪಿ ಯಾವೆಲ್ಲಾ ರಾಜಕೀಯ ಮುಖಂಡರ ಜೊತೆಗೆ ಶಾಮೀಲಾಗಿದ್ದಾನೆ ಎನ್ನುವ ವಿಚಾರವೂ ಡೈರಿಯಲ್ಲಿ ಅಡಗಿದೆ ಎನ್ನಲಾಗಿದೆ. ಈ ನಡುವೆ ಪೋಲೀಸರ ಹತ್ಯೆಯ ಬಳಿಕ ಸುಮಾರು ಒಂದು ವಾರಗಳ ಕಾಲ ವಿಕಾಸ್ ದುಬೆ ಸುಮಾರು ಒಂದು ಸಾವಿರ ಕಿಲೋ ಮೀಟರ್ ನಷ್ಟು ದೂರ ಯಾರ ಕಣ್ಣಿಗೂ ಕಾಣದೆ ತಪ್ಪಿಸಿಕೊಂಡಿರುವುದೂ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಕಾನ್ಪರ ಪೋಲೀಸರ ಹತ್ಯೆಯಲ್ಲಿ ಭಾಗಿಯಾದ ವಿಕಾಸ್ ದುಬೆಯ ಇಬ್ಬರು ಸಹಚರರು ಈಗಾಗಲೇ ಎನ್ ಕೌಂಟರ್ ಗೆ ಬಲಿಯಾಗಿದ್ದು, ಹಲವರನ್ನು ಪೋಲೀಸರು ಬಂಧಿಸಿದ್ದಾರೆ.