Connect with us

LATEST NEWS

ಉಡುಪಿ – ಮೋಜು ಮಸ್ತಿಗಾಗಿ ಹಣಕ್ಕೆ ಅಪಹರಣ ನಾಟಕವಾಡಿದ ಮಗ…ಗೋವಾ ಕ್ಯಾಸಿನೋದಲ್ಲಿ ಪೊಲೀಸ್ ಬಲೆಗೆ

ಉಡುಪಿ ಜೂನ್ 29: ಮೋಜು ಮಸ್ತಿ ಮಾಡಲು ಹಣಕ್ಕೆ ತನ್ನ ತಂದೆತಾಯಿಗೆ ಅಪಹರಣದ ನಾಟಕವಾಡಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಮಗನನ್ನು ಪೊಲೀಸರು ಗೋವಾದ ಕ್ಯಾಸಿನೋ ಒಂದರಲ್ಲಿ ಬಂಧಿಸಿದ್ದಾರೆ.


ಬಂಧಿತನನ್ನು ವರುಣ್ ನಾಯಕ್ (25) ಎಂದು ಗುರುತಿಸಲಾಗಿದೆ. ಬ್ಯಾಂಕ್‌ನ ನಿವೃತ್ತ ಎಜಿಎಂ ಪುತ್ರನಾಗಿರುವ ವರುಣ್ ನಾಯಕ್ ಜೂನ್ 26ರಂದು ಮಧ್ಯರಾತ್ರಿ ಪೋಷಕರಿಗೆ ಕರೆ ಮಾಡಿ ನನ್ನನ್ನು ಕೆಲವರು ಅಪಹರಿಸಿದ್ದು, ₹5 ಲಕ್ಷ ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಸುತ್ತಿದ್ದಾರೆ. ಕೂಡಲೇ ನನ್ನ ಬ್ಯಾಂಕ್ ಖಾತೆಗೆ ಹಣ ಹಾಕುವಂತೆ ಒತ್ತಾಯಿಸಿದ್ದ.

ಪೋಷಕರು ಉಡುಪಿ ಠಾಣೆಯಲ್ಲಿ ಪುತ್ರನ ಅಪಹರಣವಾಗಿರುವ ಬಗ್ಗೆ ದೂರು ಸಲ್ಲಿಸಿದ್ದರು. ವರುಣ್ ನಾಯಕ್‌ ಮೊಬೈಲ್ ಕರೆಗಳ ಆಧಾರದ ಮೇಲೆ ಪರಿಶೀಲಿಸಿದ ಪೊಲೀಸರಿಗೆ ಗೋವಾದ ಕ್ಯಾಸಿನೊದಲ್ಲಿ ಲೊಕೇಷನ್ ಪತ್ತೆಯಾಯಿತು. ಕೂಡಲೇ ಗೋವಾಗೆ ತೆರಳಿದ ಉಡುಪಿ ಪೊಲೀಸರ ತಂಡ ಗೋವಾ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದಾಗ ವರುಣ್ ನಾಯಕ್‌ ಸ್ನೇಹಿತರ ಜತೆ ಮೋಜು ಮಸ್ತಿಯಲ್ಲಿ ತೊಡಗಿರುವುದು ಬಯಲಾಯಿತು ಎಂದು ಪೊಲೀಸರು ಪ್ರಕರಣದ ವಿವರ ನೀಡಿದರು. ಮೋಜಿಗಾಗಿ ಹಣದ ಅವಶ್ಯಕತೆ ಇದ್ದ ಕಾರಣ ಅಪಹರಣ ನಾಟಕವಾಡಿ ಪೋಷಕರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಗಿ ವರುಣ್ ನಾಯಕ್ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *