FILM
ಬಿಗ್ ಬಾಸ್ ಗೆ ಗುಡ್ ಬೈ ಹೇಳಿದ ಕಿಚ್ಚ ಸುದೀಪ್
ಬೆಂಗಳೂರು ಜನವರಿ 20: ಕನ್ನಡದ ಬಿಗ್ ಬಾಸ್ ನಿರೂಪಣೆಗೆ ಕಿಚ್ಚ ಸುದೀಪ್ ಗುಡ್ ಬೈ ಹೇಳಿದ್ದಾರೆ. ಈ ವಾರದ ಫಿನಾಲೆ ನನ್ನ ಕೊನೆಯ ಶೋ ಆಗಲಿದೆ ಎಂದು ಅವರು ಹೇಳಿದ್ದು, ಇದರೊಂದಿಗೆ ಬಿಗ್ ಬಾಸ್ ಜೊತೆಗಿನ ಸುದೀಪ್ ಅವರ ಬಾಂಧವ್ಯ ಅಂತ್ಯಗೊಳ್ಳಲಿದೆ.
ಈ ಬಗ್ಗೆ ಇಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಬಿಗ್ ಬಾಸ್ ಬಗ್ಗೆ ಭಾವುಕ ಮಾತುಗಳನ್ನು ಆಡಿದ್ದಾರೆ. ಬಿಗ್ ಬಾಸ್‌ನ ಕಳೆದ ಎಲ್ಲ 11 ಸೀಸನ್‌ಗಳನ್ನು ನಾನು ತುಂಬಾ ಆನಂದಿಸಿದ್ದೇನೆ. ನನ್ನ ಮೇಲೆ ಪ್ರೀತಿ ಇಟ್ಟು ನನ್ನನ್ನು ಬೆಂಬಲಿಸಿದ ನಿಮ್ಮೆಲ್ಲರಿಗೂ ನಾನು ಅಭಾರಿಯಾಗಿದ್ದೇನೆ. ಈ ಸೀಸನ್‌ನ ಫಿನಾಲೆಯೇ ನನ್ನ ಬಿಗ್‌ಬಾಸ್‌ನ ಕೊನೆ ಹೆಜ್ಜೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ನನಗೆ ಒಂದು ಅದ್ಭುತ ಹಾಗೂ ಅವಿಸ್ಮರಣಿಯ ಪಯಣವಾಗಿತ್ತು. ಸಾಧ್ಯವಾದಷ್ಟು ಮಟ್ಟಿಗೆ ಶೋಗೆ ನ್ಯಾಯ ಒದಗಿಸಿ ನಿಮ್ಮನ್ನು ರಂಜಿಸಿದ್ದೇನೆ. ಇನ್ನೂ ಮುಂದೆಯೂ ರಂಜಿಸುತ್ತೇನೆ. ಅವಕಾಶ ಕೊಟ್ಟಿದ್ದ ಕಲರ್ಸ್ ಕನ್ನಡಕ್ಕೂ ನಾನು ಋಣಿಯಾಗಿದ್ದೇನೆ ಎಂದು ಹೇಳಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಶೋ ನಲ್ಲಿ ಉತ್ತಮವಾಗಿ ನಿರೂಪಣೆ ನಡೆಸಿಕೊಂಡು ಬರುತ್ತಿರುವವರಲ್ಲಿ ಸುದೀಪ್ ಮೊದಲಿಗರು, ಕನ್ನಡದಲ್ಲಿ ಸುದೀಪ್ ಅವರ ನಿರೂಪಣೆಯಿಂದಲೇ ಬಿಗ್ ಬಾಸ್ ಗೆ ಉತ್ತಮ ಟಿಆರ್ ಪಿ ಬಂದಿದೆ. ಇದೀಗ ಬಿಗ್ ಬಾಸ್ ಗೆ ಅಧಿಕೃತವಾಗಿ ವಿದಾಯವನ್ನು ಕಿಚ್ಚ ಸುದೀಪ್ ಅವರ ಹೇಳಿದ್ದಾರೆ. ಮುಂದಿನ ಬಾರಿ ಯಾರು ನಿರೂಪಕರು ಆಗುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.