LATEST NEWS
ಮಂಗಳೂರು ಗಲಾಟೆಯಲ್ಲಿ ಕೇರಳದ ಕಿಡಿಗೇಡಿಗಳ ಕೈವಾಡ…….?

ಮಂಗಳೂರು ಗಲಾಟೆಯಲ್ಲಿ ಕೇರಳದ ಕಿಡಿಗೇಡಿಗಳ ಕೈವಾಡ…….?
ಮಂಗಳೂರು ಡಿಸೆಂಬರ್ 19: ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದೆ. ಕಿಡಿಗೇಡಿಗಳು ಹಾಗೂ ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ. ಪೊಲೀಸರ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಹಿನ್ನಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಆಶ್ರುವಾಯು ಸಿಡಿಸಿದ್ದಾರೆ. ಆದರೂ ಪ್ರತಿಭಟನೆ ಗಲಭೆಗೆ ತಿರುಗಿದ್ದು, ಕಿಡಿಗೇಡಿಗಳು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ನಡುವೆ ಪೊಲೀಸರು ಆಶ್ರುವಾಯು ಸಿಡಿಸಿ ಕಿಡಿಗೇಡಿಗಳ ಗುಂಪನ್ನು ಚದುರಿಸಿದ್ದಾರೆ.
ಈ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು 100 ಕ್ಕೂ ಅಧಿಕ ಜನರನ್ನು ಬಂಧಿಸಿದ್ದು, 20ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, ಮಂಗಳೂರು ಕೇಂದ್ರ ವಿಬಾಗ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿ ಮಾಡಿ ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ ಆದೇಶ ಹೊರಡಿಸಿದ್ದಾರೆ.

ಈ ನಡುವೆ ಮಂಗಳೂರಿನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಕೇರಳದಿಂದ ಬಂದ ಕಿಡಿಗೇಡಿಗಳು ಕಾರಣ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಕೇರಳದಿಂದ ಬಂದ ಕಿಡಿಗೇಡಿಗಳು ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇಂದು ನಡೆದ ಪ್ರತಿಭಟನೆ ಪೂರ್ವ ನಿಯೋಜಿತ ಕೃತ್ಯ ಎಂಬುದು ಸಂಶಯಕ್ಕೆ ಕಾರಣವಾಗಿದ್ದು, ಹಿಂಸಾತ್ಮಕ ಹೋರಾಟ ನಡೆಸುವ ಇರಾದೆಯಿಂದಲೇ ಕಿಡಿಗೇಡಿಗಳು ಕೇರಳದಿಂದ ಮಂಗಳೂರಿಗೆ ನುಸುಳಿದ್ದಾರೆ ಎಂದು ಅಂದಾಜಿಸಲಾಗಿದೆ.
ಕಳೆದ ಎರಡು ದಿನಗಳಿಂದ ಮಂಗಳೂರಿನಲ್ಲಿ ಪ್ರತಿಭಟನೆಗೆ ಆಗಮಿಸುವಂತೆ ಸಂದೇಶವನ್ನು ಮೊಬೈಲ್ ಮೂಲಕ ವೈರಲ್ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಬಂದರಿನಲ್ಲಿ ಪ್ರತಿಭಟನಾ ನಿರತ ಗುಂಪಿನ ಜೊತೆ ಕೇರಳದಿಂದ ಬಂದ ಕಿಡಿಗೇಡಿಗಳು ಹಿಂಸಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.