LATEST NEWS
ಕೇರಳ ಕೆಜಿ ಗೆ 45 ರೂಪಾಯಿ ಬೆಲೆಯಲ್ಲಿ ಬಸ್ ಮಾರಾಟ
ಕೊಚ್ಚಿ: ಕೊರೊನಾ ಲಾಕ್ ಡೌನ್ ನಿಂದಾಗಿ ಉಂಟಾದ ನಷ್ಟವನ್ನು ಸರಿದೂಗಿಸಲು ಬಸ್ ಮಾಲಕರೊಬ್ಬರು ತಮ್ಮ ಬಸ್ ಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಆದರೆ ಅದರಲ್ಲೇನು ಅಚ್ಚರಿ ಎಂದರೆ ಅವರು ತಮ್ಮ ಬಸ್ ಗಳನ್ನು ಕೆಜಿ ಗೆ 45 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ.
ರಾಯ್ಸನ್ ಜೋಸೆಫ್ ಎಂಬುವವರು ಟೂರಿಸ್ಟ್ ಬಸ್ ಉದ್ಯಮ ನಡೆಸುತ್ತಿದ್ದರು, ಆದರೆ ಕೊರೊನಾ ಸೊಂಕು ಕಾಣಿಸಿಕೊಂಡ ಮೇಲೆ ಲಾಕ್ ಡೌನ್ ನಿಂದಾಗಿ ಕಳೆದ ಒಂದೂವರೆ ವರ್ಷಗಳಲ್ಲಿ ಪ್ರಯಾಣ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ಬಸ್ ಉದ್ಯಮದಲ್ಲಿ ನಷ್ಟ ಅನುಭವಿಸಿದ್ದಾರೆ. ಲಾಕ್ ಡೌನ್ ನಿರ್ಬಂಧದಿಂದಾಗಿ ಪ್ರವಾಸಿಗರ ಆಗಮನವೂ ಕಡಿಮೆಯಾಗಿರುವುದರಿಂದ ತೀವ್ರ ನಷ್ಟಕ್ಕೊಳಗಾಗಿ ಬ್ಯಾಂಕ್ ಸಾಲ ಮರಳಿಸಲು ಈಗ ಬಸ್ ಗಳನ್ನು ಗುಜರಿಗೆ ಮಾರಾಟ ಮಾಡುತ್ತಿದ್ದಾರೆ.
ಅವರು ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರುವಂತೆ ಕೆ.ಜಿ.ಗೆ 45 ರೂ. ಬೆಲೆ ನಿಗದಿ ಪಡಿಸಿದ ನಂತರ ಇದುವರೆಗೂ 10 ಬಸ್ ಗಳು ಮಾರಾಟವಾಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಟೂರಿಸ್ಟ್ ವಾಹನ ಮಾಲಕರ ಸಂಘ, ರಾಜ್ಯಾದ್ಯಂತ ಸುಮಾರು 2,000 ಟೂರಿಸ್ಟ್ ವಾಹನಗಳು ಗುಜರಿ ಸೇರಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ 1,000 ಬಸ್ಸುಗಳನ್ನು ಬ್ಯಾಂಕುಗಳು ಮತ್ತು ಸಾಲ ನೀಡಿದವರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.