LATEST NEWS
ಕೇರಳ – ತೂಕ ಇಳಿಸಲು ಯೂಟ್ಯೂಬ್ ನೋಡಿ ಡಯಟ್ ಮಾಡಿದ ವಿಧ್ಯಾರ್ಥಿನಿ ಸಾವು

ಕೇರಳ ಮಾರ್ಚ್ 10: ತೂಕ ಇಳಿಸಲು ಯೂಟ್ಯೂಬ್ ನಲ್ಲಿ ಬರುವ ಡಯಟ್ ಪ್ಲ್ಯಾನ್ ವಿಡಿಯೋಗಳನ್ನು ನೋಡಿ ಯುವತಿಯೊಬ್ಬಳು ಜೀವವನ್ನೇ ಕಳೆದುಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕಣ್ಣೂರಿನ ಕೂತುಪರಂಬದ ಮೇರುವಾಂಬೈ ಆರೋಗ್ಯ ಕೇಂದ್ರದ ಬಳಿಯ ಕೈತೇರಿಕಂಡಿ ನಿವಾಸಿ 18 ವರ್ಷದ ಎಂ. ಶ್ರೀನಂದ ಮೃತ ಯುವತಿ. ತಲಶ್ಶೇರಿ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಶನಿವಾರ ಕೊನೆಯುಸಿರೆಳೆದಿದ್ದಾಳೆ. ಮಟ್ಟನೂರಿನ ಪಳಸ್ಸಿ ರಾಜ ಎನ್‌ಎಸ್‌ಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿಪೂರ್ವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು, ಶ್ರೀನಂದ ಅಧಿಕ ತೂಕ ಹೊಂದಿದ್ದಾಳೆಂದು ಭಾವಿಸಿ ಯೂಟ್ಯೂಬ್ ನೋಡಿ ಆಹಾರ ಕ್ರಮವನ್ನು ಅನುಸರಿಸುತ್ತಿದ್ದಳು. ದೇಹಕ್ಕೆ ಬೇಕಾಗಿರುವ ಆಹಾರಕ್ಕಿಂತ ಕಡಿಮೆ ಆಹಾರ ಸೇವಿಸಿ ನಂತರ ಆಕೆಯ ಹೊಟ್ಟೆ ಮತ್ತು ಅನ್ನನಾಳ ಕುಗ್ಗಿ ಅನಾರೋಗ್ಯಕ್ಕೆ ಒಳಗಾಗಿ ಪ್ರಾಣ ಬಿಟ್ಟಿದ್ದಾಳೆ ಎಂದು ವರದಿಯಾಗಿದೆ.

ಅನೇಕ ದಿನಗಳ ಹಿಂದೆಯೇ ಶ್ರೀನಂದಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಶ್ರೀನಂದಾ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ. ನಾಗೇಶ್ ಪ್ರಭು, ಶ್ರೀನಂದಾ ಅನೋರೆಕ್ಸಿಯಾ ನರ್ವೋಸಾ (anorexia nervosa)ದಿಂದ ಬಳಲುತ್ತಿದ್ದರು ಎಂದಿದ್ದಾರೆ. ಇದು ತೂಕ ಹೆಚ್ಚಾಗುವ ತೀವ್ರ ಭಯದಿಂದ ಉಂಟಾಗುವ ಅಸ್ವಸ್ಥತೆಯಾಗಿದೆ. ಶ್ರೀನಂದಾ ಸುಮಾರು ಆರು ತಿಂಗಳ ಹಿಂದೆ ಯುಟ್ಯೂಬ್ ನೋಡಿ ಈ ಡಯಟ್ ಶುರು ಮಾಡಿದ್ದರು. ಶ್ರೀನಂದಾಗೆ ಮೊದಲೇ ಚಿಕಿತ್ಸೆ ನೀಡುವಂತೆ ಕುಟುಂಬಸ್ಥರಿಗೆ ಆಪ್ತರು ಸಲಹೆ ನೀಡಿದ್ದರು. ಆದ್ರೆ ಕುಟುಂಬಸ್ಥರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.