National
ಅಂಧ ವೃದ್ಧನಿಗಾಗಿ ಓಡೋಡಿ ಬಂದು ಬಸ್ ನಿಲ್ಲಿಸಿದ ಮಹಿಳೆ- ವಿಡಿಯೋ ವೈರಲ್
ಕೇರಳ : ಅಂಧ ವ್ಯಕ್ತಿಯೊಬ್ಬರಿಗೆ ನೆರವಾಗಲು ಮಹಿಳೆಯೊಬ್ಬರು ಚಲಿಸುತ್ತಿರುವ ಬಸ್ಸಿನ ಹಿಂದೆ ಓಡಿ ಅದನ್ನು ನಿಲ್ಲಿಸಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯ ಮಾನವೀಯತೆಯನ್ನು ಸಾಮಾಜಿಕ ಜಾಲತಾಣದ ಜನರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಸುಪ್ರಿಯಾ ಎಂಬ ಮಹಿಳೆ ಅಂಧ ವೃದ್ಧರೊಬ್ಬರಿಗೆ ಸಹಾಯ ಮಾಡಿದ್ದಾರೆ. ಅಜ್ಜ ಬಸ್ಸಿನಲ್ಲಿ ತೆರಳಬೇಕಿತ್ತು. ಈ ವಿಚಾರ ತಿಳಿದ ಮಹಿಳೆ ಬಸ್ಸಿನ ಬಳಿ ಓಡೋಡಿ ಬಂದು ಬಸ್ಸು ನಿಲ್ಲಿಸಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಅಲ್ಲೇ ಇದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಮಹಿಳೆಯ ಕಾರ್ಯಕ್ಕೆ ನಟ-ನಟಿಯರು ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಜ್ಜ ಬಸ್ಸಿಗಾಗಿ ಕಾಯುತ್ತಿದ್ದರು. ಆದರೆ ಅದಾಗಲೇ ನಿಲ್ದಾಣಕ್ಕೆ ಬಂದ ಬಸ್ಸು ಹೊರಡಲಾರಭಿಸಿದೆ. ಈ ವಿಚಾರ ಮಹಿಳೆಯ ಗಮನಕ್ಕೆ ಬಂದಿದ್ದು, ಕೂಡಲೇ ಹೊರಡಲು ಅಣಿಯಾದ ಬಸ್ಸನ್ನು ನಿಲ್ಲಿಸಿದ್ದಾರೆ. ಅಲ್ಲದೆ ಅಜ್ಜನ ಬಳಿ ಹೋಗಿ ಅವರ ಕೈಹಿಡಿದು ಬಸ್ಸಿನ ಬಳಿ ಕರೆತಂದು ಹತ್ತಿಸಿ ವಾಪಸ್ ಆಗಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಲ್ಲರೂ ತಮ್ಮ ಟ್ವಿಟ್ಟರ್ ಅಕೌಂಟ್ ಗಳಲ್ಲಿ ವಿಡಿಯೋ ಶೇರ್ ಮಾಡಿಕೊಂಡು ಮಹಿಳೆಯ ಕಾರ್ಯಕ್ಕೆ ಶಹಬ್ಬಾಸ್ ಅಂದಿದ್ದಾರೆ. ಅಂತೆಯೇ ಐಪಿಎಸ್ ಅಧಿಕಾರಿ ಕೂಡ ಈ ವಿಡಿಯೋವನ್ನು ಶೇರ್ ಮಾಡಿಕೊಂಡು, ಈ ಜಗತ್ತು ಬದುಕಲು ಒಂದು ಉತ್ತಮ ಸ್ಥಳ ಎಂಬುದನ್ನು ಈ ಮಹಿಳೆ ತೋರಿಸಿದ್ದಾರೆ. ಅವರ ಈ ಕುರುಣೆ ತುಂಬಾ ಸುಂದರವಾಗಿದೆ ಎಂದು ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
41 ಸೆಕೆಂಡ್ ಇರುವ ಈ ವಿಡಿಯೋವನ್ನು ಸುಮಾರು 6.2 ಲಕ್ಷಕ್ಕಿಂತಯೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಕಮೆಂಟ್ ಮೂಲಕ ಎಲ್ಲರೂ ಮಹಿಳೆಯ ಕಾರ್ಯವನ್ನು ಮೆಚ್ಚಿ ಕೊಂಡಿದ್ದಾರೆ. ಮಹಿಳೆ ಜಾಲಿ ಸಿಲ್ಕ್ಸ್ ಎಂಬ ಟೆಕ್ಸ್ ಟೈಲ್ ನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.