LATEST NEWS
ಕೇರಳದಲ್ಲಿ ಬರೋಬ್ಬರಿ 31,445 ಹೊಸ ಕೊರೊನಾ ಪ್ರಕರಣ ದಾಖಲು
ಕೇರಳ ಅಗಸ್ಟ್ 25: ಕೇರಳದಲ್ಲಿ ಕೊರೊನಾ ಪ್ರಕರಣ ಏರಿಕೆಯಾಗುತ್ತಿದ್ದು, ಇಂದು ಒಂದೇ ದಿನ ಬರೋಬ್ಬರಿ 31,445 ಹೊಸ ಕೊರೊನಾ ಪ್ರಕರಣ ವರದಿಯಾಗಿದ್ದು, 215 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಕೇರಳದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು. ಕೇರಳದಲ್ಲಿ ಎರಡನೇ ಬಾರಿಗೆ ಕೊರೊನಾ ಪ್ರಕರಣ 30 ಸಾವಿರದ ಗಡಿ ದಾಟಿದೆ. ಇಂದು 31,445 ಮಂದಿಗೆ ಕೊರೊನಾ ಸೊಂಕು ತಗುಲಿದ್ದು, ಇದರೊಂದಿಗೆ ದೇವರ ನಾಡಿನಲ್ಲಿ ಸೋಂಕಿತರ ಸಂಖ್ಯೆ 38,83,429ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ ಇಂದು 215 ಮಂದಿ ಕೋವಿಡ್ ಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 19,972ಕ್ಕೆ ತಲುಪಿದೆ.
ಇನ್ನೂ ನೆರೆಯ ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ದರ(ಟಿಪಿಆರ್) ಮತ್ತಷ್ಟು ಏರಿಕೆಯಾಗಿದ್ದು, ಶೇಕಡಾ 19 ರ ಗಡಿ ದಾಟಿದೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಓಣಂ ಹಬ್ಬದ ನಂತರ, ವೈದ್ಯಕೀಯ ತಜ್ಞರು ಟಿಪಿಆರ್ ಶೇಕಡಾ 20 ಕ್ಕಿಂತ ಹೆಚ್ಚಾಗುತ್ತದೆ ಮತ್ತು ಸೋಂಕುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು.
ಜುಲೈ 27 ರಿಂದ, ಕೆಲವು ದಿನಗಳವರೆಗೆ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಿದ ನಂತರ, ಬಕ್ರೀದ್ ಬಳಿಕ ಕೇರಳದಲ್ಲಿ ಪ್ರತಿ ದಿನ 20,000ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ.