LATEST NEWS
ತಾಯಿಯಿಂದ ಬೇರ್ಪಟ್ಟಿದ ಮಗುವಿಗೆ ಹಾಲುಣಿಸಿದ ಮಹಿಳಾ ಪೊಲೀಸ್ ಅಧಿಕಾರಿ
ತಿರುವನಂತಪುರಂ ನವೆಂಬರ್ 2: ಕೌಟುಂಬಿಕ ಕಲಹಕ್ಕೆ ತಾಯಿಂದ ಬೆರ್ಪಟ್ಟ 12 ದಿನದ ಮಗುವಿಗೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಹಾಲುಣಿಸಿದ ಘಟನೆ ನಡೆದಿದ್ದು, ಪೊಲೀಸ್ ಅಧಿಕಾರಿಯ ಮಾನವೀಯತೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಕೋಝಿಕ್ಕೋಡ್ ಚೇವಾಯೂರ್ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಎಂ.ಆರ್ ರಮ್ಯಾ ಮತ್ತು ಅವರ ಕುಟುಂಬವನ್ನು ಪೊಲೀಸ್ ಪ್ರಧಾನ ಕಚೇರಿಗೆ ಆಹ್ವಾನಿಸಿ, ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.
ಚೆವಾಯೂರು ಪೊಲೀಸ್ ಠಾಣೆಗೆ ತಾಯಿಯೊಬ್ಬಳು ತನ್ನ 12 ದಿನದ ಮಗು ಕಾಣೆಯಾಗಿದೆ ಎಂದು ದೂರು ನೀಡಿದ್ದಳು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗುವನ್ನು ತಾಯಿಯಿಂದ ದೂರ ಮಾಡಿ, ತಂದೆ ಮಗುವನ್ನು ಹಿಡಿದುಕೊಂಡು ಹೋಗಿದ್ದಾನೆ. ಬಳಿಕ ಆತ ಮಗುವನ್ನು ಹಿಡಿದುಕೊಂಡು ಬೆಂಗಳೂರಿಗೆ ಕೆಲಸಕ್ಕೆ ಹೋಗಿರುವ ಮಾಹಿತಿ ಪಡೆದ ಪೊಲೀಸರು ವಯನಾಡು ಗಡಿಯಲ್ಲಿ ವಾಹನ ತಪಾಸಣೆ ನಡೆಸಿದ್ದಾರೆ. ಈ ವೇಳೆ ಆತ ಮಗುವಿನೊಂದಿಗೆ ಸಿಕ್ಕಿಬಿದ್ದಿದ್ದಾನೆ.
ಬಳಿಕ ಪೊಲೀಸರು ಹಸಿವಿನಿಂದ ಬಳಲುತ್ತಿದ್ದ ನವಜಾತ ಶಿಶುವನ್ನು ಆಸ್ಪತ್ರೆಗೆ ಸಾಗಿಸಿದರು. ಶಿಶುವಿನ ಸಕ್ಕರೆ ಮಟ್ಟ ಕಡಿಮೆಯಾಗಿದೆ ಎಂದು ವೈದ್ಯರು ತಿಳಿಸಿದ್ದು, ಈ ವೇಳೆ ಆಸ್ಪತ್ರೆ ತಲುಪಿದ ರಮ್ಯಾ ಮಗುವಿಗೆ ಹಾಲುಣಿಸಲು ಮುಂದಾಗಿದ್ದಾರೆ. ಅದೇ ದಿನ ಸಂಜೆ ಮಗು ತಾಯಿಯ ಮಡಿಲು ಸೇರಿದೆ. 2 ಮಕ್ಕಳ ತಾಯಿಯಾಗಿರುವ ರಮ್ಯಾ ಅವರ ಪತಿ ಅಶ್ವಂತ್ ವಿಶ್ವನ್ ಶಾಲಾ ಶಿಕ್ಷಕರಾಗಿದ್ದಾರೆ.