ಉತ್ತರಾಖಂಡ ಅಕ್ಟೋಬರ್ 18: ಕೇದಾರನಾಥ ಬಳಿ ಭಕ್ತರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿದ್ದು, ಈ ವೇಳೆ ಇಬ್ಬರು ಪೈಲಟ್, 4 ಯಾತ್ರಾರ್ಥಿಗಳು ಸೇರಿದಂತೆ 6 ಮಂದಿ ದುರ್ಮರಣಕ್ಕಿಡಾಗಿದ್ದಾರೆ. ಕೇದಾರನಾಥದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಗರುಡ ಚಟ್ಟಿಯಲ್ಲಿ ಈ ಘಟನೆ ನಡೆದಿದೆ. ಹೆಲಿಕಾಪ್ಟರ್ ಯಾತ್ರಿಕರನ್ನು ಗುಪ್ತಕಾಶಿ ಫಟಾದಿಂದ ಕೇದಾರನಾಥಕ್ಕೆ ಕರೆದೊಯ್ಯುತ್ತಿತ್ತು.

ಆರು ಮೃತದೇಹಗಳನ್ನು ಪತ್ತೆ ಹಚ್ಚಲಾಗಿದ್ದು, ಇನ್ನೊಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ. ಹೆಲಿಕಾಪ್ಟರ್ನಲ್ಲಿ ಒಟ್ಟು 7 ಜನ ಇದ್ದರು. ಈ ದುರ್ಘಟನೆ ಕೇದಾರನಾಥದಿಂದ ಅಣತಿ ದೂರದಲ್ಲಿರುವ ಫಾಟಾದಲ್ಲಿ ನಡೆದಿದೆ. ಮೃತರ ಗುರುತು ಪತ್ತೆಗೆ ಶ್ರಮಿಸಲಾಗುತ್ತಿದ್ದು, ಪರಿಹಾರ ಕಾರ್ಯಾಚರಣೆ ತಂಡ ಸ್ಥಳಕ್ಕೆ ತೆರಳಿದೆ ಎಂದು ಉತ್ತರಾಖಂಡ ಸಿಎಂ ಅವರ ಪ್ರಧಾನ ಕಾರ್ಯದರ್ಶಿ ಅಭಿನವ್ ಕುಮಾರ್ ತಿಳಿಸಿದ್ದಾರೆ.
ಹೆಲಿಕಾಪ್ಟರ್ ಕೇದಾರನಾಥದಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಹವಾಮಾನ ವೈಪರಿತ್ಯದಿಂದ ಅಪಘಾತಕ್ಕೆ ಈಡಾಗಿದೆ ಎಂದು ವರದಿ ತಿಳಿಸಿದೆ. ಹೆಲಿಕಾಪ್ಟರ್ ಡೆಹರಾಡೂನ್ಗೆ ತೆರಳುತ್ತಿತ್ತು ಎನ್ನಲಾಗಿದೆ.