LATEST NEWS
ಕಾವೇರಿ 2.0 ಸಾಪ್ಟ್ ವೇರ್ ಸಮಸ್ಯೆ – ತಕ್ಷಣ ಸಮಸ್ಯೆ ಪರಿಹರಿಸಲು ಮಂಗಳೂರು ವಕೀಲರ ಸಂಘ ಆಗ್ರಹ
ಮಂಗಳೂರು ಫೆಬ್ರವರಿ 04: ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾವೇರಿ 2.0 ಸಾಫ್ಟ್‌ವೇರ್‌ನ ಸಿಟಿಝೆನ್ ಲಾಗಿನ್ ಕಾರ್ಯನಿರ್ವಹಿಸುತ್ತಿಲ್ಲದ ಕಾರಣ ಕಳೆದ ಶನಿವಾರದಿಂದ ರಾಜ್ಯದಾದ್ಯಂತ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ಕುರಿತು ರಾಜ್ಯ ಸರ್ಕಾರದ ರಾಜ್ಯ ಕಂದಾಯ ಸಚಿವರು ನಿರ್ಲಕ್ಷ್ಯಪೂರ್ಣ ಹೇಳಿಕೆ ನೀಡಿದ್ದು, ಇಲಾಖೆಯು ಈ ತೊಂದರೆಯ ಮೂಲಕಾರಣವನ್ನು ಹಾಗೂ ಪರಿಹಾರದ ಮಾರ್ಗಗಳನ್ನು ಅರಿಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
2025ರ ಫೆಬ್ರವರಿ 1ನೇ ತಾರೀಕು ಶನಿವಾರದಿಂದ ಈ ಸಮಸ್ಯೆ ಉಲ್ಬಣಗೊಂಡಿದ್ದು, ಆ ದಿನ ರಾಜ್ಯಾದ್ಯಂತ ಯಾವುದೇ ನೋಂದಣಿ ಸಾಧ್ಯವಾಗಿರುವುದಿಲ್ಲ. 2025ರ ಫೆಬ್ರವರಿ 3ರಿಂದ ಉಪನೋಂದಣಿ ಕಚೇರಿ (SRO) ಲಾಗಿನ್ ಕಾರ್ಯನಿರ್ವಹಿಸುತ್ತಿದ್ದರೂ, ಸಿಟಿಝೆನ್ ಲಾಗಿನ್ ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ. ಈ ತಾಂತ್ರಿಕ ತೊಂದರೆಯಿಂದ ಸಾರ್ವಜನಿಕರು, ವಕೀಲರು ಹಾಗೂ ನೋಂದಣಿ ಕಚೇರಿಗೆ ಸಂಬಂಧಪಟ್ಟ ಇತರರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಈ ಗಂಭೀರ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಸಂಬಂಧಿತ ಇಲಾಖೆ ಹಾಗೂ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಮಂಗಳೂರು ವಕೀಲರ ಸಂಘ ಆಗ್ರಹಿಸುತ್ತದೆ. ಈ ಹಿನ್ನೆಲೆಯಲ್ಲಿ, ಮಂಗಳೂರು ವಕೀಲರ ಸಂಘವು ತುರ್ತು ಪತ್ರಿಕಾ ಪ್ರಕಟಣೆ ನೀಡಲು ನಿರ್ಧರಿಸಿದೆ. ಸರ್ಕಾರವು ತಕ್ಷಣ ಕ್ರಮ ಕೈಗೊಂಡು ನಾಗರಿಕ ಲಾಗಿನ್ ಪುನಃ ಚಾಲನೆ ಮಾಡುವ ಬಗ್ಗೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ, ವಕೀಲರ ಸಂಘವು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದೆ.