LATEST NEWS
ಹೈಕೋರ್ಟ್ ಆದೇಶಕ್ಕೂ ಕ್ಯಾರೆ ಅನ್ನದ ಜಿಲ್ಲಾಡಳಿತಗಳು..ಕೇರಳ ದಕ್ಷಿಣಕನ್ನಡ ಅಂತರ ರಾಜ್ಯ ಬಸ್ ಸಂಚಾರ ಇನ್ನೂ ಮರಿಚಿಕೆ….!!

ಮಂಗಳೂರು ಸೆಪ್ಟೆಂಬರ್ 23: ಕೇಂದ್ರ ಸರಕಾರ, ಕೇರಳ ಹೈಕೋರ್ಟ್ ಆದೇಶಗಳ ನಂತರವೂ ದಕ್ಷಿಣಕನ್ನಡ ಹಾಗೂ ಕಾಸರಗೋಡು ನಡುವೆ ಕೆಲವು ನಿರ್ಬಂಧಗಳು ಇನ್ನು ಮುಂದುವರೆದಿದೆ. ಆರು ತಿಂಗಳಿನಿಂದ ಬಂದ್ ಆಗಿರುವ ಸರಕಾರಿ ಬಸ್ ಸಂಚಾರ ಇನ್ನೂ ಆರಂಭವಾಗಿಲ್ಲ.
ಕೊರೊನಾ ಹಿನ್ನಲೆ ಗಡಿಗಳನ್ನು ಬಂದ್ ಮಾಡಿಕೊಂಡಿದ್ದ ದಕ್ಷಿಣಕನ್ನಡ ಹಾಗೂ ಕಾಸರಗೋಡು ಜಿಲ್ಲಾಡಳಿತ, ಕೇಂದ್ರ ಸರಕಾರ ಅನ್ಲಾಕ್ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿ ಅಂತರ ರಾಜ್ಯ ಸಂಚಾರಕ್ಕೆ ಇರುವ ನಿರ್ಬಂಧವನ್ನು ತೆಗೆದು ಹಾಕಿತ್ತು. ಆದರೂ ಕಾಸರಗೋಡು ಜಿಲ್ಲಾಡಳಿತ ಮಾತ್ರ ಕೇಂದ್ರ ಸರಕರಾದ ಆದೇಶನ್ನು ತಿರಸ್ಕರಿಸಿ ಜನರ ಸಂಚಾರಕ್ಕೆ ನಿರ್ಬಂಧ ಹೇರಿತ್ತು, ನಂತರ ಬಿಜೆಪಿ ಮುಖಂಡರು ಕೇರಳ ಹೈಕೋರ್ಟ್ ಮೆಟ್ಟಿಲೇರಿ ಮುಕ್ತ ಸಂಚಾರಕ್ಕೆ ಆದೇಶ ತಂದರೂ ಸರಕಾರಿ ಬಸ್ ಸೇವೆ ಪ್ರಾರಂಭಿಸಲು ಮೀನಮೇಷ ಎಣಿಸುತ್ತಿದೆ.

ಕೇರಳ ಸರಕಾರ ರಸ್ತೆ ಸಂಚಾರಕ್ಕೆ ಮುಕ್ತ ಅವಕಾಶ ನೀಡದ ಹಿನ್ನೆಲೆಯಲ್ಲಿ ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ಹೈಕೋರ್ಟ್ ತೀರ್ಪು ಪ್ರಕಟಿಸಿ ರಸ್ತೆ ಸಂಚಾರವನ್ನು ಮುಕ್ತಗೊಳಿಸಬೇಕು ಎಂದು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಂಚಾರಕ್ಕೆ ಇದ್ದ ನಿರ್ಬಂಧ ತೆರವುಗೊಂಡು ಎಲ್ಲ ರಸ್ತೆಗಳಲ್ಲಿ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಆದರೆ ಮುಕ್ತ ಸಂಚಾರಕ್ಕೆ ಅವಕಾಶ ಸಿಕ್ಕರೂ ಕೇರಳದ ಕಾಸರಗೋಡು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಬಸ್ ಸಂಚಾರ ಆರಂಭಿಸುವ ಬಗ್ಗೆ ಉಭಯ ರಾಜ್ಯಗಳು ಇದುವರೆಗೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಕಾಸರಗೋಡಿನಿಂದ ಮಂಗಳೂರಿಗೆ ಸೆ.21ರಿಂದ ಬಸ್ ಆರಂಭಿಸಲಾಗುವುದು ಎಂದು ಕೇರಳ ಸಾರಿಗೆ ಸಂಸ್ಥೆ ತಿಳಿಸಿದ್ದರೂ ಬಸ್ ಸಂಚಾರ ಆರಂಭವಾಗಿಲ್ಲ.
ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳ ನಡುವೆ 21 ಅಂತಾರಾಜ್ಯ ಸಂಪರ್ಕಿಸುವ ರಸ್ತೆಗಳಿದ್ದು, ಅವುಗಳಲ್ಲಿ 12 ಮಾರ್ಗಗಳಲ್ಲಿ ಅಂತಾರಾಜ್ಯ ಬಸ್ ಸಂಚಾರವಾಗುತ್ತಿದೆ. ಮಾರ್ಚ್ ತಿಂಗಳ ಅಂತ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದಲೇ ಈ ಎಲ್ಲ ರಸ್ತೆಗಳ ಸಂಚಾರ ನಿರ್ಬಂಧಿಸಲಾಗಿತ್ತು. ಆ ಬಳಿಕ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಬಂಧ ಸಡಿಲಿಸಿದ್ದರೂ ಕೇರಳ ಸರಕಾರ ಸಂಚಾರಕ್ಕೆ ಅನುವು ಮಾಡಿರಲಿಲ್ಲ. ಒಟ್ಟಾರೆ ಕಳೆದ ಆರು ತಿಂಗಳಿನಿಂದ ಬಸ್ ಸಂಚಾರ ಇಲ್ಲದೆ ಉಭಯ ರಾಜ್ಯದ ಸಾವಿರಾರು ಮಂದಿ ಪ್ರಯಾಣಿಕರು ಸಮಸ್ಯೆಯಲ್ಲಿ ಸಿಲುಕಿದ್ದಾರೆ.