Connect with us

LATEST NEWS

ಕಾಸರಗೋಡು – ಗ್ರಾಮಗಳ ಕನ್ನಡ ಹೆಸರು ಬದಲಾವಣೆಗೆ ಯಾವುದೇ ಆದೇಶ ಬಂದಿಲ್ಲ -ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಸ್ಪಷ್ಟನೆ

ಕಾಸರಗೋಡು ಜೂನ್ 29: ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ಕನ್ನಡದಲ್ಲಿರುವ ಪ್ರದೇಶಗಳ ಹೆಸರನ್ನು ಮಲೆಯಾಳಂ ಭಾಷೆಗೆ ಬದಲಾವಣೆ ಮಾಡುವ ಯಾವುದೇ ಆದೇಶವನ್ನು ಕೇರಳ ಸರಕಾರ ಹೊರಡಿಸಿಲ್ಲ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಸ್ಪಷ್ಟನೆ ನೀಡಿದ್ದಾರೆ. ಕನ್ನಡ ಗ್ರಾಮಗಳ ಹೆಸರು ಬದಲಾಯಿಸಲಾಗುತ್ತಿದೆ ಎಂಬ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಈ ಕುರಿತು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಶಾಸಕರು ಸ್ಪಷ್ಟನೆ ನೀಡಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳಾಗಿದ್ದು, ಈ ಕುರಿತಂತೆ ಕೇರಳ ಮುಖ್ಯಮಂತ್ರಿ ಕಚೇರಿಯಿಂದ ಮಾಹಿತಿ ಪಡೆಯಲಾಗಿದ್ದು, ಈ ಎಲ್ಲಾ ಮಾಹಿತಿ ಪ್ರಕಾರ ಸ್ಥಳ ನಾಮ ಬದಲಾವಣೆ ಬಗ್ಗೆ ಹೊರ ಬರುವ ವಿಚಾರಗಳು ವಾಸ್ತವ ವಿರುದ್ಧ. ಇಂತಹ ಯಾವುದೇ ಸುತ್ತೋಲೆ ಕೇರಳ ಸರಕಾರ ಹೊರಡಿಸಲಿಲ್ಲ.ಅಂತಹ ಯಾವುದೇ ಯೋಚನೆಯು ಸರಕಾರದ ಮುಂದಿಲ್ಲ. ಆದರೆ ರೇಶನ್ ಕಾರ್ಡ್ ನಲ್ಲಿ ಸಾಪ್ಟ್ ವೇರ್ ಕಾರಣದಿಂದ ಕೆಲವು ಹೆಸರುಗಳಲ್ಲಿ ಬದಲಾವಣೆ ಆಗಿರುವುದು ಸತ್ಯ. ಆದರೆ ಇದು ತಾಂತ್ರಿಕ ಕಾರಣದಿಂದ ಉಂಟಾದ ಲೋಪ.ಇದನ್ನು ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಅಧಿಕೃತವಾಗಿ ಯಾವುದೇ ಸುತ್ತೋಲೆ ಇಲ್ಲದೆ ಕೇವಲ ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿಗಳ ಆಧಾರದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವ ಟ್ವೀಟ್,ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನೀಡಿದ ಹೇಳಿಕೆ ಜನರಲ್ಲಿ ಗೊಂದಲ ಉಂಟುಮಾಡಿದೆ.ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ನೀಡಿದ ಅನಗತ್ಯ ಹೇಳಿಕೆಯು ವಿಷಾದನೀಯ.ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಪರವಾಗಿ ಕೆಲವು ಪೂರಕ ಕ್ರಮಗಳನ್ನು ಕೇರಳದಲ್ಲಿ ಎಲ್ಲಾ ಸರಕಾರಗಳು ಕೈಗೊಂಡಿದೆ. ಭಾಷಾ ಅಲ್ಪಸಂಖ್ಯಾತರಿಗೆ ಸಮಸ್ಯೆ ಆಗುವ ವಿಚಾರಗಳನ್ನು ಸರಕಾರದ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸರ್ಕಾರ ಧನಾತ್ಮಕವಾಗಿ ಸ್ಪಂದಿಸುವ ವಾತಾವರಣ ಕೇರಳದಲ್ಲಿದೆ. ಪರಿಹಾರವಾಗಬೇಕಾದ ಸಮಸ್ಯೆಗಳು ಇನ್ನೂ ಇರುವುದು ವಾಸ್ತವ. ಇದನ್ನು ಸಂಘಟಿತ ಪ್ರಯತ್ನದಿಂದ ಪರಿಹರಿಸಲು ಸಾಧ್ಯವಾಗುವ ವಾತಾವರಣ ನಿರ್ಮಾಣವಾಗಬೇಕು.ನಾಡಿನ ಭಾಷಾ ಸಾಮರಸ್ಯವನ್ನು, ಸಾಂಸ್ಕೃತಿಕ ವೈವಿಧ್ಯತೆಯನ್ನು ಉಳಿಸಿ ಬೆಳೆಸುವಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗಬಾರದು.

ಮಂಜೇಶ್ವರದ ಶಾಸಕ ಹಾಗೂ ಒಬ್ಬ ಅಪ್ಪಟ ಕನ್ನಡಿಗನೆಂಬ ನೆಲೆಯಲ್ಲಿ ಕಾಸರಗೋಡಿನ ಯಾವುದೇ ಪ್ರದೇಶದ ಸ್ಥಳನಾಮವನ್ನು ಬದಲಾಯಿಸುವ ಷಡ್ಯಂತ್ರವೋ, ಸರಕಾರದ ಅದೇಶವೆನಾದರೂ ಬಂದರೆ ಆದರ ವಿರುದ್ದದ ಹೋರಾಟಕ್ಕೆ ನೇತೃತ್ವ ನೀಡಲು ನಾನು ಸಿದ್ಧ.ಕನ್ನಡ ಅಲ್ಪಸಂಖ್ಯಾತರ ಸಂವಿಧಾನ ಬದ್ಧ ಹಕ್ಕುಗಳ ಸಂರಕ್ಷಣೆಯಲ್ಲಿ ಸದಾ ಜಾಗೃತನಾಗಿರುತ್ತೇನೆ ಎಂದು ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *