LATEST NEWS
ಕೇರಳ ಕೊರೊನಾ ಹೆಚ್ಚಳ – ತಲಪಾಡಿಯಲ್ಲಿ ಕೋವಿಡ್ ಟೆಸ್ಟ್ ಸ್ಥಗಿತಗೊಳಿಸಿದ ದ.ಕ ಜಿಲ್ಲಾಡಳಿತ

ಕಾಸರಗೋಡು ಅಗಸ್ಟ್ 2: ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಾದ ಹಿನ್ನಲೆ ಕೇರಳ ಮತ್ತು ಕರ್ನಾಟಕ ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ.ರಾಜ್ಯ ಸರ್ಕಾರದ ಸೂಚನೆ ಬೆನ್ನಲ್ಲೇ ತಲಪಾಡಿ ಗಡಿಯನ್ನು ಜಿಲ್ಲಾಡಳಿತ ಸಂಪೂರ್ಣ ಬಂದ್ ಮಾಡಿದೆ.
ರಾಜ್ಯ ಸರಕಾರ ಈಗಾಗಲೇ ಕೇರಳದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, 72 ಗಂಟೆಯೊಳಗೆ ತೆಗೆದ ಕೊರೊನಾ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ.
ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದವರನ್ನು ವಾಪಸ್ ಕಳುಹಿಸಲಾಗುತ್ತಿದೆ. ತಲಪಾಡಿ ಗಡಿ ಚೆಕ್ ಪೋಸ್ಟ್‌ನಲ್ಲಿ ವ್ಯವಸ್ಥೆ ಮಾಡಲಾಗಿದ್ದ ಆರ್‌ಟಿಪಿಸಿಆರ್ ಪರೀಕ್ಷಾ ಕೇಂದ್ರವನ್ನು ಬಂದ್ ಮಾಡಲಾಗಿದೆ. ಕೇರಳದಿಂದಲೇ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತರಲು ಸೂಚನೆ ನೀಡಲಾಗಿದೆ. ಸ್ವಯಂ ಪ್ರೇರಿತ ನೆಗೆಟಿವ್ ವರದಿ ತಂದರಷ್ಟೇ ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಗಡಿಭಾಗದ ಚೆಕ್ ಪೋಸ್ಟ್ ನಲ್ಲಿ ಪರೀಕ್ಷಾ ಕೇಂದ್ರ ಬಂದ್ ಮಾಡಿದ್ದರಿಂದ, ತಪಾಸಣೆಗಾಗಿ ಗಡಿಯಲ್ಲಿ ಸಾಲುಗಟ್ಟಿ ನಿಂತಿದ್ದ ಜನರು ಅಸಮಾಧಾನ ವ್ಯಕ್ತಪಡಿಸಿದರು. ಏಕಾಏಕಿ ಟೆಸ್ಟಿಂಗ್ ಸ್ಥಗಿತಗೊಳಿಸಿದ್ದು ಸರಿಯಲ್ಲ ಅಂತ ಕೇರಳಿದವರು ಆಕ್ರೋಶ ವ್ಯಕ್ತಪಡಿಸಿದರು. ಲಸಿಕೆ ಎರಡು ಡೋಸ್ ಪಡೆದವರಿಗೆ ಮಂಗಳೂರು ಪ್ರವೇಶಕ್ಕೆ ಅನುಮತಿ ಕೊಡಿ ಎಂದು ಒತ್ತಾಯಿಸಿದರು. ಏಕಾಏಕಿ ಟೆಸ್ಟಿಂಗ್ ಸ್ಥಗಿತದಿಂದ ಗಡಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆಯನ್ನು ನಡೆಸಿದರು.