KARNATAKA
ಕಾಸರಗೋಡು : ಬಸ್ ಸ್ಟಾಪ್ ನಿರ್ಮಿಸದೆ ಪ್ರಯಾಣಿಕರಿಗೆ ತೊಂದರೆ,ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿ ಬ್ಯಾನರ್..!

ಕಾಸರಗೋಡು : ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ಕಾಲ ಸನ್ನಿಹಿತ ವಾಗುತ್ತಿದ್ದಂತೆ ಇತ್ತ ಚುನಾವಣಾ ಬಹಿಷ್ಕಾರದ ಕೂಗು ಆರಂಭವಾಗಿದೆ. ಕಾಸರಗೋಡಿನ ಕುಂಬ್ಳೆ ಭಾಸ್ಕರ ನಗರದಲ್ಲಿ ಬಸ್ ಸ್ಟಾಪ್ ನಿರ್ಮಾಣ ಮಾಡದೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು ಇದರಿಂದ ರೋಸಿಹೋದ ಸ್ಥಳೀಯರು ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.
ತಮ್ಮ ಬಹು ಕಾಲದ ಜನಪರ ಬೇಡಿಕೆಗಳನ್ನು ಈಡೇರಿಸದ ಕಾರಣ ಚುನಾವಣೆಯನ್ನೇ ಬಹಿಷ್ಕರಿಸುವುದಾಗಿ ಚುನಾವಣಾ ಬಹಿಷ್ಕಾರದ ಬ್ಯಾನರ್ ನ್ನು ಸ್ಥಳೀಯರು ಅಳವಡಿಸಿದ್ದಾರೆ. ಎಲ್ಲೆಂದರಲ್ಲಿ ಬಸ್ ವೇಟಿಂಗ್ ಶೆಡ್‌ಗಳು ಅದೂ ಬೇಡವಾದ ಕಡೆ ನಿರ್ಮಿಸಲಾಗಿದೆ.

ನಮ್ಮ ನಾಡಿನಲ್ಲಿ ಮಾತ್ರ ಬಸ್ ವೇಟಿಂಗ್ ಶೆಡ್‌ಗಳಿಗೆ ಅವಕಾಶವಿಲ್ಲ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಮಳೆ, ಬಿಸಿಲು ಲೆಕ್ಕಿಸದೆ ಇಲ್ಲಿಂದ ಬಸ್ ಹತ್ತುತ್ತಿದ್ದು , ರಸ್ತೆ ಬದಿ ನಿಂತು ಬಸ್ ಗಾಗಿ ಕಾಯಬೇಕಾದ ಪರಿಸ್ಥತಿ ನಿರ್ಮಾಣವಾಗಿದೆ. ಮತ ಕೇಳಲು ಬರುವ ಮುನ್ನ ಇದಕ್ಕೊಂದು ಶಾಶ್ವತ ಪರಿಹಾರ ಪಡಕೊಂಡು ಇಲ್ಲಿಗೆ ಮತ ಪ್ರಚಾರಕ್ಕೆ ಬಂದರೆ ಸಾಕು ಎಂದು ಸ್ಥಳೀಯ ಭಾಸ್ಕರ ನಗರದ ಶೆಟ್ಟಿಗದ್ದೆಯ ನಿವಾಸಿಗಳು ಬ್ಯಾನರ್ ಅಳವಡಿಸಿದ್ದಾರೆ.