KARNATAKA
ಕಾರವಾರ: ಯಶಸ್ವಿ ಕಾರ್ಯಾಚರಣೆಯಲ್ಲಿ ಕೊನೆಗೂ ದಡ ಸೇರಿತು ಕಾಳಿ ನದಿ ಪಾಲಾಗಿದ್ದ ಟ್ರಕ್..!
ಕಾರವಾರ : ಆಗಸ್ಟ್ ಮೊದಲ ವಾರದಲ್ಲಿ ಸೇತುವೆ ಕುಸಿದು ಕಾಳಿ ನದಿ ಪಾಲಾಗಿದ್ದ ಟ್ರಕ್ ಸತತ 8 ಗಂಟೆಗಳ ಪರಿಶ್ರಮದಲ್ಲಿ ಕೊನೆಗೂ ದಡ ಸೇರಿದೆ. ಆಗಸ್ಟ್ 7 ರಂದು ಕಾಳಿ ನದಿಯ ಹಳೆಯ ಸೇತುವೆ ಕುಸಿದ ಪರಿಣಾಮ ತಮಿಳು ನಾಡಿನ ಮೂಲದ ಲಾರಿ ನದಿ ಪಾಲಾಗಿತ್ತು.
8 ತಾಸುಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಕಾಳಿ ನದಿಯ ಅಳ್ವೇವಾಡ ದಂಡೆಗೆ ಗುರುವಾರ ಸಂಜೆ ಸುಮಾರಿಗೆ ಎಳೆದು ತರಲಾಗಿದೆ.ಬೆಳಿಗ್ಗೆಯಿಂದ ಐ.ಆರ್. ಬಿ. ಕಂಪನಿ ಸಿಬ್ಬಂದಿ ಹಾಗೂ ಜಿಲ್ಲಾಡಳಿತ ಜಂಟಿ ನಡೆಸಿದ್ದ ಜಂಟಿ ಕಾರ್ಯಾಚರಣೆ ಫಲಕೊಟ್ಟಿತ್ತು. ಎಸ್ ಡಿ ಆರ್ ಎಫ್, ಕರಾವಳಿ ಕಾವಲು ಪಡೆ ಕೂಡ ಕಾರ್ಯಾಚರಣೆಗೆ ಸಾಥ್ ನೀಡಿತ್ತು. ದಡಕ್ಕೆ ಬಂದ ಲಾರಿಯನ್ನು ಕೆಲ ನಿಮಿಷದಲ್ಲಿ ಕ್ರೇನ್ ಮೂಲಕ ಮೇಲಕ್ಕೆತ್ತುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಯಿತು. ಇದಕ್ಕೂ ಮುನ್ನ ಮೂರು ಹಗ್ಗಗಳನ್ನು ಲಾರಿಗೆ ಈಶ್ವರ ಮಲ್ಪೆ ಹಾಗೂ ಅವರ ತಂಡ ಸ್ಕೂಬಾ ಡೈವ್ ಮಾಡಿ ಕಟ್ಟಿ ಬಂದಿತ್ತು . ಹಾಗೂ ಮೂರು ಟೋಯಿಂಗ್ ವಾಹನಗಳ ಮೂಲಕ ನಿಧಾನಕ್ಕೆ ಲಾರಿಯನ್ನು ದಡದತ್ತ ಎಳೆಯಲಾಯಿತು .
ಲಾರಿಗೆ ನದಿಯ ಕಲ್ಲು ಅಡ್ಡ ಬಂದ ಕಾರಣ ಕಾರ್ಯಾಚರಣೆ ತಡವಾಯಿತು .ಕಾರ್ಯಾಚರಣೆ ಸ್ಥಳಕ್ಕೆ ಮಧ್ಯಾಹ್ನ ಎರಡು ಗಂಟೆಗೆ ಆಗಮಿಸಿದ್ದ ಸಚಿವ ಮಂಕಾಳು ವೈದ್ಯ ಕಾರ್ಯಾಚರಣೆ ಮಾಡುವವರಿಗೆ ಧೈರ್ಯ ತುಂಬಿದರು. ಲಾರಿ ಮಾಲಕ ಸೇಂಥಿಲ್ ಗೆ ಸಾಂತ್ವನ ಹೇಳಿದರು. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಎಸ್ಪಿ ನಾರಾಯಣ ಅವರು ಸಹ ಕಾರ್ಯಾಚರಣೆ ತಂಡಕ್ಕೆ ಮಾರ್ಗದರ್ಶನ ಮಾಡಿದ್ದರು . ಸ್ಥಳದಲ್ಲಿ ಬೀಡು ಬಿಟ್ಟಿದ್ದ ಪೊಲೀಸರು ಹಾಗೂ ಅಧಿಕಾರಿಗಳು ಕಾರ್ಯಾಚರಣೆ ನೋಡಲು ಬಂದಿದ್ದ ಸಾರ್ವಜನಿಕರನ್ನು ನಿಯಂತ್ರಿಸಿದರು.