KARNATAKA
ಕಾರವಾರ – ತೂಗುಸೇತುವೆ ಮೇಲೆ ಕಾರು ಚಲಾಯಿಸಿ ಧರ್ಪ ತೋರಿದ ಪ್ರವಾಸಿಗರು….!!

ಕಾರವಾರ ನವೆಂಬರ್ 1: ಗುಜರಾತ್ ನಲ್ಲಿ ಮೊರ್ಬಿ ತೂಗುಸೇತುವೆ ದುರಂತದ ಬೆನ್ನಲ್ಲೇ ಇದೀಗ ಯಲ್ಲಾಪುರ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆಯ ಮೇಲೆ ಅಪರಿಚಿತರು ಕಾರನ್ನು ಚಲಾಯಿಸಿಕೊಂಡು ಬಂದು ಜನರ ಜೀವಕ್ಕೆ ಅಪಾಯ ತಂದಿಟ್ಟಿದ್ದಾರೆ.
ಪ್ರಸಿದ್ಧ ಯಾತ್ರಾಸ್ಥಳ ಜೊಯಿಡಾ ತಾಲ್ಲೂಕಿನ ಉಳವಿಯಿಂದ ಬರುವ ಅನೇಕ ಮಂದಿ ಶಿವಪುರದ ತೂಗು ಸೇತುವೆಗೆ ಭೇಟಿ ನೀಡುತ್ತಾರೆ. ಅಲ್ಲಿನ ಪ್ರಾಕೃತಿಕ ಸೌಂದರ್ಯದ ಕಾರಣ ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದೆ. ಹಲವು ಗ್ರಾಮಸ್ಥರಿಗೆ ಇದು ದೈನಂದಿನ ಜೀವನದ ಅಗತ್ಯ ಸೌಕರ್ಯವಾಗಿದೆ. ಪ್ರವಾಸ ಬಂದ ಕೆಲವರು ಸೇತುವೆಯ ಮೇಲೆ ಇಕ್ಕಟ್ಟಾದ ಜಾಗದಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಾರೆ.

ಇದಕ್ಕೆ ಸ್ಥಳೀಯರು ಆಕ್ಷೇಪಿಸಿದಾಗ ಕಾರಿನಲ್ಲಿದ್ದವರು ಅನುಚಿತವಾಗಿ ವರ್ತಿಸಿ, ದರ್ಪ ತೋರಿದ್ದಾರೆ ಎಂದು ಸ್ಥಳದಲ್ಲಿದ್ದ ಪ್ರವಾಸಿಗರು ದೂರಿದ್ದಾರೆ. ಸೇತುವೆಯಲ್ಲಿ ಸಾಗಿ ಸುಮಾರು ಮುಂದೆ ಬಂದ ಕಾರನ್ನು ಸ್ಥಳೀಯರು ತಡೆದು, ಬಂದ ದಾರಿಗೆ ಹಿಂದಕ್ಕೇ (ರಿವರ್ಸ್ ಗೇರ್‌ನಲ್ಲಿ) ಕಳುಹಿಸಿದ್ದಾರೆ. ಗುಜರಾತ್‌ನ ಮೊರ್ಬಿಯಲ್ಲಿ ತೂಗುಸೇತುವೆ ಕುಸಿದು ನೂರಾರು ಜನ ಮೃತಪಟ್ಟ ಸಂಗತಿಯಿಂದಲೂ ಕೆಲವರು ಎಚ್ಚೆತ್ತುಕೊಂಡಿಲ್ಲ. ಕಾರು ಚಲಾಯಿಸಿ ಸೇತುವೆಗೆ ಹಾನಿಯಾಗಿ ಅಪಾಯವಾದರೆ ಯಾರು ಹೊಣೆಯಾಗುತ್ತಾರೆ ಎಂದು ಪ್ರವಾಸಿಗರು, ಸ್ಥಳೀಯರು ಪ್ರಶ್ನಿಸಿದ್ದಾರೆ.