DAKSHINA KANNADA
ಮಂಗಳೂರು : ಶರಣ್ ಪಂಪ್ವೆಲ್ ವಿರುದ್ಧದ ಪೊಲೀಸ್ FIR ಗೆ ಹೈಕೋರ್ಟ್ ತಡೆ..!

ಮಂಗಳೂರು: ಮಂಗಳಾದೇವಿ ದೇವಸ್ಥಾನದಲ್ಲಿನ ವ್ಯಾಪಾರ ಕುರಿತ ಧರ್ಮ ದಂಗಲ್ ವಿಚಾರವಾಗಿ ವಿಎಚ್‌ಪಿ ಮುಖಂಡ ಶರಣ್ ಪಂಪ್ ವೆಲ್ (Sharan Pumpwell) ವಿರುದ್ಧದ ಪೊಲೀಸ್ ಎಫ್ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಮಂಗಳೂರಿನ ಪಾಂಡೇಶ್ವರ ಪೊಲೀಸರು ದಾಖಲಿಸಿದ್ದ ಸ್ವಯಂ ಪ್ರೇರಿತ ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಶರಣ್ ಪಂಪ್ ವೆಲ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಿದೆ. ಮುಸ್ಲಿಮರ ಜೊತೆ ವ್ಯಾಪಾರ ಮಾಡದಂತೆ ಕರೆ ಕೊಟ್ಟಿದ್ದ ಹಿನ್ನೆಲೆ ವಿಶ್ವಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಮಂಗಳಾದೇವಿ ಆವರಣದಲ್ಲಿರೋ ಹಿಂದೂಗಳ ಅಂಗಡಿಗಳ (Hindu Shops) ಮುಂದೆ ಭಗವಾಧ್ವಜ ಅಳವಡಿಸಲಾಗಿತ್ತು. ಭಕ್ತರು ಹಿಂದೂಗಳ ಮಳಿಗೆಯಲ್ಲಿಯೇ ವ್ಯಾಪಾರ ಮಾಡಬೇಕೆಂಬ ಬ್ಯಾನರ್ ಹಾಕಲಾಗಿತ್ತು. ಈ ಹಿನ್ನೆಲೆ ಪಾಂಡವೇಶ್ವರ ಠಾಣೆಯ ಪೊಲೀಸರು ಶಾಂತಿಭಂಗ ಹಾಗೂ ಕೋಮು ಪ್ರಚೋದನೆ ಆರೋಪದಡಿ ಐಪಿಸಿ 153A, 34 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು.
ಧರ್ಮ ದಂಗಲ್ ಹಿನ್ನೆಲೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Minister Dinesh Gundurao) ಅವರನ್ನು ಸಮಾನ ಮನಸ್ಕ ಸಂಘಟನೆಗಳಾದ ಜಾತ್ರಾ ವ್ಯಾಪಾರಸ್ಥರು, ಬೀದಿ ವ್ಯಾಪಾರಿಗಳು ಹಾಗೂ ಡಿವೈಎಫ್ಐ, ಎಡಪಂಥೀಯ ನಿಯೋಗ ಭೇಟಿಯಾಗಿತ್ತು. ಸಚಿವ ದಿನೇಶ್ ಗುಂಡೂರಾವ್ ಎದುರು ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಅಸಮಾಧಾನ ವ್ಯಕ್ತಪಡಿಸಿದ್ದರು.
ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲು ಸಂಘಟನೆಗಳ ಸದಸ್ಯರು ಆಗ್ರಹಿಸಿದ್ದರು. ಆ ಬಳಿಕ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಕರೆದು ಕಾನೂನು ಕ್ರಮಕ್ಕೆ ದಿನೇಶ್ ಗುಂಡೂರಾವ್ ಸೂಚಿಸಿದ್ದರು. ಗುಂಡೂರಾವ್ ಸೂಚನೆ ಬೆನ್ನಲ್ಲೇ ಎಫ್ಐಆರ್ ದಾಖಲಾಗಿತ್ತು.
