KARNATAKA
ಅಪಾಯಕಾರಿ ಶ್ವಾನಗಳಿಗೆ ನಿಷೇಧ ಹೇರಿದ್ದ ಕೇಂದ್ರದ ಆದೇಶ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್..!
ಬೆಂಗಳೂರು: ಮಾನವ ಜೀವಕ್ಕೆ ಅಪಾಯಕಾರಿ ಎನ್ನಲಾಗಿರುವ 23ಕ್ಕೂ ಹೆಚ್ಚು ಶ್ವಾನ ತಳಿಗಳ ಮಾರಾಟ, ಸಾಕಾಣಿಕೆ ಹಾಗೂ ಸಂತಾನೋತ್ಪತ್ತಿಗೆ ನಿಷೇಧ ಹೇರಿ ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಸಿ ಆದೇಶ ಹೊಡಿಸಿದೆ.
ಕೆಲ ಶ್ವಾನ ತಳಿ ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಕಿಂಗ್ ಸಾಲೊಮನ್ ಡೇವಿಡ್ ಮತ್ತಿತರರು ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕೇಂದ್ರದ ನಿಷೇಧದ ಸುತ್ತೋಲೆಯನ್ನು ರದ್ದುಗೊಳಿಸಿದೆ. ಕಾಯ್ದೆಯಡಿ ರಚಿಸಿದ ಸಮಿತಿಯ ಶಿಫಾರಸು ಮಾತ್ರ ಪರಿಗಣಿಸಬೇಕು. ಕ್ರಮಕ್ಕೆ ಮುನ್ನ ಶ್ವಾನ ತಳಿ ಸಂವರ್ಧನಾ ಸಂಘಟನೆಯೊಂದಿಗೆ ಸಮಾಲೋಚಿಸಬೇಕು. ಸರ್ಕಾರ ಶ್ವಾನ ತಳಿ ನಿಷೇಧಿಸುವ ಮುನ್ನ ಕಾನೂನಿನ ಕ್ರಮ ಅನುಸರಿಸಬೇಕು. ಶ್ವಾನ ಪಾಲಕರ ಮೇಲೆಯೂ ಹೊಣೆ ನಿಗದಿಪಡಿಸುವ ಅಗತ್ಯವಿದೆ. ಶ್ವಾನ ಕಡಿತಕ್ಕೊಳಗಾದವರಿಗೆ ಚಿಕಿತ್ಸೆ, ನಷ್ಟಪರಿಹಾರದಂತಹ ಹೊಣೆ ನಿಗದಿ ಸೂಕ್ತ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ಕೇಂದ್ರದ ಸುತ್ತೋಲೆಯನ್ನು ಪ್ರಶ್ನಿಸಿ ಬೆಂಗಳೂರಿನ ಕಿಂಗ್ ಸೋಲ್ಮನ್ ಡೇವಿಡ್ ಹಾಗೂ ಮರ್ಡೋನಾ ಜಾನ್ ಎಂಬುವರು ಸಲ್ಲಿಸಿದ್ದ ಆಕ್ಷೇಪಾರ್ಹ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರುಳ್ಳ ಪೀಠ, ಕೇಂದ್ರದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಏಪ್ರಿಲ್ 6ರಂದು ಇದೇ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮುಂದುವರಿಸಿತ್ತು. ಏ.10ರಂದು ಈ ಪ್ರಕರಣದ ತೀರ್ಪು ನೀಡಿರುವ ಹೈಕೋರ್ಟ್, ಕೇಂದ್ರ ಸರ್ಕಾರ ಮಾ. 12ರಂದು ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಗೊಳಿಸಿ ತೀರ್ಪು ನೀಡಿದೆ.
ಪಿಟ್‌ಬುಲ್ ಟೆರಿಯರ್, ಟೋಸಾ ಇನು, ಅಮೆರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೋ, ಅಮೇರಿಕನ್ ಬುಲ್‌ಡಾಗ್, ಬೋರ್‌ಬೋಲ್, ಕಂಗಲ್, ರಷ್ಯನ್ ಶೆಫರ್ಡ್, ಟೊರ್ನ್‌ಜಾಕ್, ಸರ್ಪ್ಲಾನಿನಾಕ್, ಜಪಾನೀಸ್ ಟೋಸಾ ಮತ್ತು ಅಕಿಟಾ, ಮಾಸ್ಟಿಫ್ಸ್, ರಾಟ್‌ವೀಲರ್, ಟೆರಿಯರ್‌ಗಳು ರಿಡ್ಜ್ಬ್ಯಾಕ್, ವುಲ್ಫ್ ಡಾಗ್ಸ್, ಕೆನರಿಯೊ, ಅಕ್ಬಾಶ್ ನಾಯಿ, ಮಾಸ್ಕೋ ಗಾರ್ಡ್ ಡಾಗ್, ಕೇನ್ ಕೊರ್ಸೊ ಮುಂತಾದ ಶ್ವಾನತಳಿಗಳನ್ನು ಸಾಕುವುದನ್ನು ಕೇಂದ್ರ ಸರಕಾರ ನಿಷೇಧಿಸಿತ್ತು.