KARNATAKA
ಸಿಎಂ ಕಚೇರಿಗೂ ತಟ್ಟಿದ ಕೊರೊನಾ ಭೀತಿ ! ಗೃಹ ಕಚೇರಿ ಬಂದ್
ಬೆಂಗಳೂರು, ಜೂನ್ 19 : ಕೊರೊನಾ ಭೀತಿ ಈಗ ರಾಜ್ಯದ ಸಿಎಂ ಯಡಿಯೂರಪ್ಪ ಅವರ ಗೃಹ ಕಚೇರಿಗೂ ತಟ್ಟಿದೆ. ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸ್ಯಾನಿಟೈಸ್ ಮಾಡುವುದಕ್ಕಾಗಿ ಕಚೇರಿಯನ್ನು ಶುಕ್ರವಾರ ಬಂದ್ ಮಾಡಲಾಗಿತ್ತು.
ಗೃಹ ಕಚೇರಿಯ ಮಹಿಳಾ ಸಿಬಂದಿಯೊಬ್ಬರ ಪತಿಗೆ ಕೊರೊನಾ ಪಾಸಿಟಿವ್ ಆಗಿದ್ದು ಈ ಹಿನ್ನೆಲೆಯಲ್ಲಿ ಸಿಬಂದಿ ಎರಡು ದಿನಗಳಿಂದ ಕಚೇರಿಗೆ ಆಗಮಿಸುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಕಚೇರಿಯನ್ನು ಪೂರ್ತಿ ಶುಕ್ರವಾರ ಸ್ಯಾನಿಟೈಸರ್ ಬಳಸಿ ಶುಚಿಗೊಳಿಸಲಾಯ್ತು. ಹೀಗಾಗಿ ಕಚೇರಿಯನ್ನು ಎರಡು ದಿನದ ಮಟ್ಟಿಗೆ ಬಂದ್ ಮಾಡಲಾಗಿದೆ.
ಸಿಎಂ ಯಡಿಯೂರಪ್ಪ ವಿಧಾನ ಸೌಧ ಕಚೇರಿಯ ಬದಲಿಗೆ ತಮ್ಮ ಕಚೇರಿ ಕಂ ಮನೆಯಾಗಿರುವ ಕೃಷ್ಣಾದಲ್ಲಿಯೇ ಹೆಚ್ಚಾಗಿ ಮಹತ್ವದ ಮೀಟಿಂಗ್ ಗಳನ್ನು ನಡೆಸುತ್ತಿದ್ದರು.
ಇದೇ ವೇಳೆ, ಬೆಂಗಳೂರು ರೈಲ್ವೇ ವಲಯದ ಡಿವಿಶನಲ್ ಕಚೇರಿಯನ್ನೂ ಕೊರೊನಾ ಭೀತಿಯಿಂದ ಬಂದ್ ಮಾಡಲಾಗಿದೆ. ಕಚೇರಿಯ ಸಿಬಂದಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಆದ ಹಿನ್ನೆಲೆ ಅಲ್ಲಿಯೂ ಸ್ಯಾನಿಟೈಸ್ ಮಾಡಲಾಗುತ್ತಿದೆ. ಸಿಎಂ ಗೃಹ ಕಚೇರಿ ಮತ್ತು ರೈಲ್ವೇ ವಲಯ ಕಚೇರಿ ಎರಡೂ ಸೋಮವಾರದ ಬಳಿಕ ತೆರೆಯುವ ಸಾಧ್ಯತೆಯಿದೆ.