LATEST NEWS
701 ಕೋಟಿ ಲಾಭಗಳಿಸಿದ ಕರ್ಣಾಟಕ ಬ್ಯಾಂಕ್
ಮಂಗಳೂರು ನವೆಂಬರ್ 03: ಕರ್ಣಾಟಕ ಬ್ಯಾಂಕ್ ಅರ್ಧ ವಾರ್ಷಿಕ ನಿವ್ವಳ ಲಾಭ ಸೆಪ್ಟೆಂಬರ್ 2023ರ ಅಂತ್ಯಕ್ಕೆ ಶೇಕಡ 33.31 ರಷ್ಟು ಏರಿಕೆಯಾಗಿದ್ದು, ಈ ಬಾರಿ ಸಾರ್ವಕಾಲಿಕ ದಾಖಲೆಯ 700.96 ಕೋಟಿ ರುಪಾಯಿಗೆ ಏರಿಕೆಯಾಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ (ಸೆಪ್ಟೆಂಬರ್2022) 525.81 ಕೋಟಿ ರು. ಆಗಿತ್ತು.
ಮಂಗಳೂರಿನ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಪ್ರಸಕ್ತ ವರ್ಷದ ದ್ವಿತೀಯ ತ್ರೈಮಾಸಿಕದ ಹಾಗೂ ಪ್ರಥಮ ಅರ್ಧ ವಾರ್ಷಿಕ (30-09-2023) ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು. ಪ್ರಸಕ್ತ ತ್ರೈಮಾಸಿಕದಲ್ಲಿ (ಸೆಪ್ಟೆಂಬರ್2023) 330.26 ಕೋಟಿ ರು. ನಿವ್ವಳ ಲಾಭವಾಗಿದೆ. ಬ್ಯಾಂಕಿನ ನಿವ್ವಳ ಬಡ್ಡಿ ಆದಾಯವು ಸೆಪ್ಟೆಂಬರ್2023ರ ತ್ರೈಮಾಸಿಕ ಅಂತ್ಯಕ್ಕೆ ಶೇ.2.45ರ ದರದಲ್ಲಿ ಹೆಚ್ಚಳಗೊಂಡು 822.41 ಕೋಟಿ ರು.ಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 802.73 ಗಳಾಗಿತ್ತು. ಕೋಟಿ
ಬ್ಯಾಂಕಿನ ಅನುತ್ಪಾದಕ ಸ್ವತ್ತುಗಳು ಗಮನಾರ್ಹ ರೀತಿಯಲ್ಲಿ ಇಳಿಕೆ ಕಂಡಿವೆ. ಒಟ್ಟು ಅನುತ್ಪಾದಕ ಸ್ವತ್ತುಗಳು ಶೇ. 3.47ಕ್ಕೆ ಇಳಿಕೆಯಾಗಿದ್ದು, ಅವು ಈ ಹಿಂದಿನ ತ್ರೈಮಾಸಿಕದಲ್ಲಿ ಅಂದರೆ ಜೂನ್ 2023ರ ವೇಳೆಗೆ ಶೇ 3.68 ಆಗಿತ್ತು. ಅಂತೆಯೇ ನಿವ್ವಳ ಅನುತ್ಪಾದಕ ಸ್ವತ್ತುಗಳು ಶೇ. 1.36ಕ್ಕೆ ಇಳಿಕೆಯಾಗಿದೆ.