LATEST NEWS
ಕರ್ಣಾಟಕ ಬ್ಯಾಂಕ್ ಆರ್ಥಿಕವಾಗಿ ಸದೃಢ – ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಎಸ್ ಭಟ್

ಮಂಗಳೂರು ಜುಲೈ 16: ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಆಗಿ ರಾಘವೇಂದ್ರ ಎಸ್ ಭಟ್ ಇಂದು ಅಧಿಕಾರ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು ವಾರ್ಷಿಕ 2 ಲಕ್ಷ ಕೋಟಿ ವ್ಯವಹಾರ ಮುಟ್ಟುವ ಗುರಿ ಹೊಂದಿದ್ದೇವೆ ಎಂದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ಇದೀಗ ನನಗೆ ಹೊಸದಾಗಿ ಕೆಲಸಕ್ಕೆ ಸೇರಿದ ಹಾಗೆ ಆಗಿದೆ. ಸಮಾಜ ಸೇವೆಗೆ ನನ್ನ ಕೈಯಲ್ಲಿ ಆಗುವಷ್ಟು ಸಹಾಯ ಮಾಡುತ್ತೇನೆ. ಕರ್ಣಾಟಕ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಿದ್ದಕ್ಕೆ ನಾನು ನನ್ನ ಆಡಳಿತಕ್ಕೆ ಮಂಡಳಿಗೆ ಧನ್ಯವಾದ ಹೇಳುತ್ತೇನೆ ಎಂದರು.

ನಾನು 38 ವರ್ಷಗಳ ಬ್ಯಾಂಕ್ ಸೇವೆಯಲ್ಲಿ ಇದ್ದೇನೆ. ಕರ್ಣಾಟಕ ಬ್ಯಾಂಕ್ ನ ಆರ್ಥಿಕ ಸ್ಥಿತಿ ಸದೃಢವಾಗಿದ್ದು, ಗ್ರಾಹಕರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು. ಬ್ಯಾಂಕ್ ವಿಲೀನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಬ್ಯಾಂಕ್ ವಿಲೀನ ಎಂಬ ಸುದ್ದಿ ನಾನು ಸೇವೆಯಲ್ಲಿರುವಾಗಲೇ ನಾಲ್ಕೈದು ಬಾರಿ ಕೇಳಿ ಬಂದಿತ್ತು, ಆದರೆ ಯಾವುದೇ ರೀತಿ ವಿಲೀನ ವಿಚಾರ ಇಲ್ಲ ಎಂದರು. ಮಂಗಳೂರು ಪ್ರಧಾನಕಚೇರಿಯ ಸ್ಥಳಾಂತರ ಕುರಿತಂತೆ ಯಾವುದೇ ನಿರ್ಧಾರ ಆಗಿಲ್ಲ. ಅದು ಕೇವಲ ಉಹಾಪೋಹದ ಸುದ್ದಿ ಎಂದರು.
ಕರ್ಣಾಟಕ ಬ್ಯಾಂಕ್ ಗೆ ಹೊರಗಿನವರ ಎಂಡಿ ಆಗಿ ಅಧಿಕಾರ ನಡೆಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಬದಲಾವಣೆ ಅನ್ನುವುದು ಆ ಸಮಯಕ್ಕೆ ಸಂಬಂಧಿಸಿದ ನಿರ್ಧಾರವಾಗಿದ್ದು, ಹೊರಗಿನವರು ಒಳಗಿನವರು ಎಂದು ಇಲ್ಲ. ಅದು ಆಡಳಿತ ಮಂಡಳಿಗೆ ತೆಗೆದುಕೊಂಡ ನಿರ್ಧಾರವಾಗಿದೆ ಎಂದರು.