LATEST NEWS
ಕಾರ್ಕಳ – ಪ್ಲ್ಯಾಟ್ ನಲ್ಲಿ ಸಿಲಿಂಡರ್ ಸ್ಪೋಟ ಮನೆಗಳಿಗೆ ಹಾನಿ
ಕಾರ್ಕಳ ಜುಲೈ 28: ನಾಲ್ಕನೇ ಮಹಡಿಯ ಪ್ಯಾಸೆಜ್ ನಲ್ಲಿ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆ ಸಂಪೂರ್ಣ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪುಲ್ಕೇರಿ ಬೈಪಾಸ್ ಬಳಿ ಶನಿವಾರ ರಾತ್ರಿ ನಡೆದಿದೆ.
ಕಾರ್ಕಳ ಬೈಪಾಸ್ ಬಳಿಯ ಶ್ರೀಕೃಷ್ಣ ಎಂಕ್ಲೇವ್ ಕಟ್ಟಡದ 4ನೇ ಮಹಡಿಯಲ್ಲಿ ಈ ಘಟನೆ ನಡೆದಿದ್ದು, ಉದಯ ಕೋಟ್ಯಾನ್ ಎಂಬವರ ಫ್ಲ್ಯಾಟ್ ನಲ್ಲಿ ರಾತ್ರಿ 10.30 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಉದಯ ಕೋಟ್ಯಾನ್ ಅವರು ಮನೆಯ ಮೇಲ್ಭಾಗಕ್ಕೆ ಓಡಿ ಹೋಗಿ ಸಹಾಯಕ್ಕಾಗಿ ರಸ್ತೆಯಲ್ಲಿ ಹೋಗುವವರನ್ನು ಕರೆದಿದ್ದಾರೆ. ಪಕ್ಕದ ಫ್ಲ್ಯಾಟ್ ನಲ್ಲಿ ವಾಸವಾಗಿರುವ ಪುತ್ತಬ್ಬ ಎಂಬವರ ಪತ್ನಿ ,ಸೊಸೆ ಹೊಗೆ ಮತ್ತು ಬೆಂಕಿ ಕಂಡು ತೊಟ್ಟಿಲಲ್ಲಿದ್ದ ಮಗುವನ್ನು ಎತ್ತಿಕೊಂಡು ಕೆಳಗೆ ಓಡಿ ಬಂದಿದ್ದಾರೆ. ನಂತರ ಬೆಂಕಿಯ ತೀವ್ರತೆ ಹೆಚ್ಚಾಗಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು ಉದಯ ಕೋಟ್ಯಾನ್ ಮನೆಯ ಗೋಡೆ ಹಾಗೂ ಬಾಗಿಲು ಸಂಪೂರ್ಣ ನುಚ್ಚು ನೂರಾಗಿದೆ.
ಸಿಲಿಂಡರ್ ಸ್ಫೋಟದ ರಭಸಕ್ಕೆ ಪಕ್ಕದ ಯಾರೂ ಇಲ್ಲದ ಫ್ಲ್ಯಾಟ್ ಬಾಗಿಲು ಒಡೆದು ಒಳಗಿರುವ ಪೀಠೋಪಕರಣಗಳು , ಬಟ್ಟೆಬರೆ, ಕಪಾಟು, ಕಿಚನ್ ನಲ್ಲಿರುವ ವಸ್ತುಗಳು ಹಾಗೂ ರೂಂನಲ್ಲಿರುವ ವಸ್ತುಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಪುತ್ತಬ್ಬ ಅವರ ಮನೆಯ ಕಿಟಕಿ ಗಾಜುಗಳು ಹುಡಿಯಾಗಿದ್ದು, ಕಬ್ಬಿನ ಹಾಗೂ ಅಲ್ಯೂಮಿನಿಯಂ ರಾಡ್ ಹಾಗೂ ಪಟ್ಟಿಗಳು ರಸ್ತೆಗೆಸೆಯಲ್ಪಟ್ಟಿವೆ. ಇತರ ಫ್ಲ್ಯಾಟ್ ಗಳ ಬಾಗಿಲು,ಕಿಟಕಿ ಹಾಗೂ ಇನ್ನಿತರ ವಸ್ತುಗಳಿಗೆ ಹಾನಿಯಾಗಿದೆ. ಫ್ಲ್ಯಾಟ್ ನಲ್ಲಿರುವವರ ಸಮಯ ಪ್ರಜ್ಞೆಯಿಂದ ಪ್ರಾಣಹಾನಿ ಸಂಭವಿಸಿಲ್ಲವಾದರೂ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡಲೇ ಕಾರ್ಯ ಪ್ರವೃತರಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.