DAKSHINA KANNADA
ವಿವೇಕಾನಂದ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ದಿನ ಆಚರಣೆ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವ ದಿನವನ್ನು ಆಚರಿಸಲಾಯಿತು. ಈ ಪ್ರಯುಕ್ತ ಕಾಲೇಜಿನ ಎನ್ ಸಿಸಿ ಘಟಕದ ವತಿಯಿಂದ ದೀಪ ಬೆಳಗಿಸಿ, ಪುಷ್ಪಾರ್ಚನೆ ಗೈದು ಹುತಾತ್ಮ ಯೋಧರನ್ನು ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಸ್ತುತ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೈಬ್ ಲತೇಶ್ ಅವರನ್ನು ಗೌರವಿಸಲಾಯಿತು. ಸೇನೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು ವಿದ್ಯಾರ್ಥಿಗಳನ್ನು ಸೈನ್ಯಕ್ಕೆ ಸೇರುವಂತೆ ಹುರಿದುಂಬಿಸಿದರು.
ಅಲ್ಲದೇ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ನಮ್ಮ ವ್ಯಕ್ತಿತ್ವವೂ ಉತ್ತಮಗೊಳ್ಳಲು ಸಹಕಾರಿಯಾಗುತ್ತದೆ. ಸೇನೆಯಲ್ಲಿರುವ ಸಮಯಪ್ರಜ್ಞೆ ಹಾಗೂ, ಕಟ್ಟುನಿಟ್ಟಾದ ಶಿಸ್ತು ನಮ್ಮ ಬದುಕನ್ನು ಬದಲಾಯಿಸುತ್ತದೆ. ಹಾಗಾಗಿ ನೀವೆಲ್ಲರೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ಹೇಳಿದರು.
ಈ ಸಂದರ್ಭ ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ. ಶಿವಪ್ರಸಾದ್ ಮಾತನಾಡಿ ಸೈನಿಕರು ನಮ್ಮ ಜೀವನದ ನಿಜವಾದ ಹೀರೋಗಳು ಹಾಗೂ ನೈಜ ಸ್ಪೂರ್ತಿ. ನಾವಿಂದು ಸುರಕ್ಷಿತವಾಗಿ ನೆಮ್ಮದಿಯಿಂದ ನಿದ್ರಿಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ದೇಶದ ಸೈನಿಕರೇ ಕಾರಣ. ಅಂತಹ ವೀರ ಸೈನಿಕರನ್ನು ನಾವು ಪ್ರತಿದಿನ ಸ್ಮರಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಎನ್ ಸಿಸಿ ಅಧಿಕಾರಿ ಲೆ.ಭಾಮಿ ಅತುಲ್ ಶೆಣೈ, ಕಾಲೇಜಿನ ಉಪನ್ಯಾಸಕರು ಬೋಧಕೇತರ ಸಿಬ್ಬಂದಿ ಗಳು, ಎನ್ ಸಿಸಿ ಕೆಡೆಟ್ ಗಳು ಉಪಸ್ಥಿತರಿದ್ದರು. ಕಾಲೇಜಿನ ಎನ್ ಸಿಸಿ ಕೆಡೆಟ್ ಲಿಖಿತಾ ವಿ.ಕೆ ಕಾರ್ಯಕ್ರಮವನ್ನು ನಿರ್ವಹಿಸಿದರು.