UDUPI
ಕಾಪು ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕೆಲಸಗಳು ರಾಜ್ಯಕ್ಕೇ ಮಾದರಿ: ಈಶ್ವರ ಖಂಡ್ರೆ
ಕಾಪು ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿ ಕೆಲಸಗಳು ರಾಜ್ಯಕ್ಕೇ ಮಾದರಿ: ಈಶ್ವರ ಖಂಡ್ರೆ
ಉಡುಪಿ ಮಾರ್ಚ್ 9 : ಕಾಪು ವಿಧಾನ ಸಭಾ ಕ್ಷೇತ್ರವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿಯ ಕಾಮಗಾರಿಗಳು ರಾಜ್ಯಕ್ಕೆ ಮಾದರಿಯಾಗಿದ್ದು, ನನ್ನ ಕ್ಷೇತ್ರದಲ್ಲೂ ಇದೇ ಮಾದರಿಯನ್ನು ಅನುಸರಿಸಿಕೊಂಡು ಅಭಿವೃದ್ಧಿಯನ್ನು ಮಾಡುತ್ತೇನೆ ಎಂದು ಪೌರಾಡಳಿತ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಶುಕ್ರವಾರ ಕಾಪು ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಾಪು ವಿಧಾನ ಸಭಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.
ಯೋಜನಾಬದ್ಧವಾಗಿ ನಗರಗಳು ಬೆಳೆಯಬೇಕಾದರೆ ಕಸವಿಲೇವಾರಿ ಸಮಸ್ಯೆಗೆ ಪರಿಹಾರ ಕಾಣುವುದರ ಜೊತೆಗೆ ಮತ್ತು ರಾಜ್ಯವನ್ನು ಬಹಿರ್ದೆಸೆ ಮುಕ್ತವಾಗಿ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಪೌರಕಾರ್ಮಿಕರಿಗೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ಹೊರಗುತ್ತಿಗೆ ಆಧಾರದಲ್ಲಿ 2 ವರ್ಷಗಿಂತ ಮೇಲ್ಪಟ್ಟ ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. ವೇತನ ಹೆಚ್ಚಳ, ಜೀವನ ಸುರಕ್ಷತೆ, 7.5 ಲಕ್ಷ ವಸತಿ ಸೌಲಭ್ಯ ಕೂಡ ಕಲ್ಪಿಸಲಾಗುತ್ತಿದೆ. ತ್ವರಿತಗತಿಯಲ್ಲಿ ಮಾಹಿತಿ, ಸೌಲಭ್ಯಗಳು ದೊರೆಯುವಂತೆ ಆ್ಯಪ್‍ಗಳನ್ನು ಕಲ್ಪಿಸಿದ್ದು, ಜನಹಿತಕ್ಕಾಗಿ ಎಲ್‍ಸಿಡಿ, ಎಲ್‍ಇಡಿ ಗಳ ಮೂಲಕ ಮೂಲಸೌಕರ್ಯಗಳು ದೊರೆಯುವಂತೆ ಸುಲಭೀಕರಿಸಲಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸಚಿವ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ , ಕಾಪು ಪಟ್ಟಣ ಮತ್ತು ಗ್ರಾಮಗಳು ಶರವೇಗದಲ್ಲಿ ಅಭಿವೃದ್ಧಿಹೊಂದುವಂತೆ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಇನ್ನು ಮುಂದೆಯೂ ಕೂಡಾ ಕಾಪು ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಶರವೇಗದಲ್ಲಿ ಮುಂದುವರೆಯುತ್ತದೆ ಎಂದು ತಿಳಿಸಿದರು.
ಕಾಪು ಪುರಸಭಾ ವ್ಯಾಪ್ತಿಯ ಸುಮಾರು 130 ಕೋ.ರೂ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು 850 ಲಕ್ಷ.ರೂ ವೆಚ್ಚದ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಲಾಗುತ್ತಿದ್ದು, 5 ಸ್ಮಾಶನಾ, 2 ಸೇತುವೆ, 8 ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭ ಕಾಪು ಪುರಸಭಾ ವ್ಯಾಪ್ತಿಯ ಜನತೆಗೆ ಹಕ್ಕುಗಳನ್ನು ಮತ್ತು ಯುವಜನ ಸೇವಾ ಕ್ರೀಡಾ ಇಲಾಖೆ ವತಿಯಿಂದ ವಿವಿಧ ಸಂಸ್ಥೆಗೆ ಕ್ರೀಡಾ ಕಿಟ್‍ಗಳನ್ನು ವಿತರಿಸಲಾಯಿತು.