KARNATAKA
ಚುನಾವಣೆ ಪ್ರಚಾರಕ್ಕೂ ಬಂತು ಕಾಂತಾರದ ಭೂತಕೋಲ ದೃಶ್ಯ…!!
ಬೆಂಗಳೂರು ಫೆಬ್ರವರಿ 19: ಕಾಂತಾರ ಸಿನೆಮಾ ಬಂದ ಮೇಲೆ ಇದಿಗೂ ಭೂತಕೋಲ ದೃಶ್ಯಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಳಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಚಾರಕ್ಕೂ ಕಾಂತಾರದ ಸನ್ನಿವೇಶಗಳನ್ನು ಬಳಸಲಾರಂಭಿಸಿದ್ದು, ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರ್ನಾಟಕದಲ್ಲಿ ಚುನಾವಣೆಯ ಕಾವು ಹೆಚ್ಚಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪ್ರಚಾರಕಾರ್ಯ ನಡೆಯುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ವಿವಿಧ ರೀತಿಯಲ್ಲಿ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿವೆ. ಉಪೇಂದ್ರ ಅವರ ಪ್ರಜಾಕೀಯ ಪಕ್ಷ ಕೂಡ ಹಣಾಹಣಿಗೆ ಸಜ್ಜಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ‘ಕಾಂತಾರ’ ಸಿನಿಮಾದ ದೃಶ್ಯವನ್ನು ಇಟ್ಟುಕೊಂಡು ಚುನಾವಣೆ ಕುರಿತು ಜಾಗೃತಿ ಮೂಡಿಸುವಂತಹ ಒಂದು ಪ್ರಯತ್ನ ನಡೆದಿದೆ. ಅದರಲ್ಲಿ ಪ್ರಜಾಕೀಯದ ಪ್ರಚಾರ ಕೂಡ ಆಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಕಾಂತಾರ’ ಸಿನಿಮಾದಲ್ಲಿನ ಮುಖ್ಯ ಆಕರ್ಷಣೆಯೇ ಭೂತಕೋಲದ ದೃಶ್ಯ. ಇದರಲ್ಲಿ ರಿಷಬ್ ಶೆಟ್ಟಿ ಅವರು ದೈವ ನರ್ತಕನ ಪಾತ್ರ ಮಾಡಿದ್ದಾರೆ. ತನ್ನ ಭೂಮಿಯನ್ನು ಊರಿನ ಜನರಿಂದ ಹಿಂದಿರುಗಿಸಿಕೊಡಿ ಎಂದು ದೈವದ ಬಳಿ ಸಾಹುಕಾರನ ಮಗ ಬೇಡಿಕೆ ಇಡುವ ದೃಶ್ಯ ಈ ಸಿನಿಮಾದಲ್ಲಿದೆ. ಆ ಬೇಡಿಕೆಗೆ ದೈವ ಒಪ್ಪದೇ ಇದ್ದಾಗ ತಾನು ಕೋರ್ಟಿಗೆ ಹೋಗುವುದಾಗಿ ಆತ ತಿಳಿಸುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ದೈವವು, ‘ಕೋರ್ಟಿಗೆ ಹೋಗ್ತಿ.. ಆದರೆ ನಿನ್ನ ತೀರ್ಮಾನ ಮೆಟ್ಟಿಲ ಮೇಲೆ ನಾನು ಮಾಡ್ತೀನಿ’ ಎಂದು ಹೇಳುತ್ತದೆ. ಇದೇ ದೃಶ್ಯವನ್ನು ಈಗ ಎಡಿಟ್ ಮಾಡಲಾಗಿದೆ.
ಹಣ, ಸೀರೆ, ಸಾರಾಯಿ ಹಂಚಿ ಮತ ಕೇಳುವುದು ಸರಿಯಲ್ಲ ಎಂಬ ಸಂದೇಶವನ್ನು ಈ ವಿಡಿಯೋ ಮೂಲಕ ಹೇಳಲಾಗಿದೆ. ‘ಸೀರೆ, ಸಾರಾಯಿ, ಹಣವನ್ನು ಈ ಜನರಿಗೆ ಹಂಚುತ್ತೇನೆ. ಅವರ ಮತವನ್ನು ನನಗೆ ಹಾಕಿಸಿಕೊಡಬೇಕು’ ಎಂದು ದೈವದ ಬಳಿ ರಾಜಕೀಯ ನಾಯಕನು ಬೇಡಿಕೆ ಇಡುತ್ತಾನೆ. ಅದಕ್ಕೆ ಪ್ರತಿಕ್ರಿಯೆಯಾಗಿ, ‘ಬಹಳ ಒಳ್ಳೆಯ ಪ್ರಾರ್ಥನೆ.. ಈ ಊರಿನವರ ಮತವನ್ನು ನಿಮಗೆ ಹಾಕಿಸಿಕೊಡುತ್ತೇನೆ. ಆದರೆ ಇಲ್ಲಿಯವರೆಗೆ ಇವರು ಕಟ್ಟಿದ ತೆರಿಗೆ ಹಣವನ್ನು ಹಿಂದಿರುಗಿಸಿಕೊಡಬಹುದಾ ರಾಜಕೀಯ ನಾಯಕರೇ?’ ಎಂದು ದೈವ ಮರುಪ್ರಶ್ನೆ ಕೇಳುತ್ತದೆ.
ದೈವ ಹೇಳಿದ್ದಕ್ಕೆ ಆತ ಒಪ್ಪುವುದಿಲ್ಲ. ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗುತ್ತೇನೆ ಎಂದು ಅವನು ಹೇಳುತ್ತಾನೆ. ಅದಕ್ಕೆ ಉತ್ತರಿಸುವ ದೈವ, ‘ಸೀರೆ, ಸಾರಾಯಿ ಹಂಚ್ತಿ.. ಆದ್ರೆ ಇದರ ತೀರ್ಮಾನವನ್ನು ಮತಗಟ್ಟಲೆಯಲ್ಲಿ ನಾನು ಮಾಡುತ್ತೇನೆ. ಈ ತೆರಿಗೆ ಹಣ ಊರಿನವರದ್ದು. ಅದರ ತೀರ್ಮಾನ ಇವತ್ತಲ್ಲ. ಮುಂದೊಂದು ದಿನ ಪ್ರಜಾಕೀಯ ಬರಬೇಕಾಗುತ್ತದೆ’ ಎಂದು ಹೇಳುವ ರೀತಿಯಲ್ಲಿ ವಿಡಿಯೋ ಎಡಿಟ್ ಮಾಡಲಾಗಿದೆ.