LATEST NEWS
ರಾಕ್ ಕರ್ನಾಟಕ ಸಂಘ ರಾಸ್ ಅಲ್ ಖೈಮಾ ಇವರಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ
ದುಬೈ ನವೆಂಬರ್ 11: ರಾಕ್ ಕರ್ನಾಟಕ ಸಂಘ ರಾಸ್ ಅಲ್ ಖೈಮಾ, ಯುಎಇ ಇದರ ವತಿಯಿಂದ ಹಾಗೂ ಯುಎಇ ಅನಿವಾಸಿ ಕನ್ನಡಿಗರ ಒಟ್ಟುಗೂಡುವಿಕೆಯಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಸಮಾರಂಭವು ನವೆಂಬರ್ 04 ರಂದು ಇಂಡಿಯನ್ ಅಸೋಸಿಯೇಶನ್ ಹಾಲ್, ರಾಸ್ ಅಲ್ ಖೈಮಾ ಇಲ್ಲಿ ಅದ್ದೂರಿಯಿಂದ ಜರುಗಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಎನ್ಆರ್ ಐ ಫೋರಂ ಇದರ ಅಧ್ಯಕ್ಷರು ಹಾಗೂ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ಇದರ ಆಡಳಿತ ನಿರ್ದೇಶಕರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಕರ್ನಾಟಕ ಸಂಘ ದುಬೈ ಇದರ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ ಮತ್ತು ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿದ್ದ ಎಲ್ಲ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಕಡ್ತಲ ಸಂತೋಷ್ ಹೆಗ್ಡೆ ಇವರು ಮಾತನಾಡುತ್ತ, ನಮ್ಮವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ನಮ್ಮ ನಾಡು, ಭಾಷೆಯ ಬಗ್ಗೆ ಅಭಿಮಾನ ಬೆಳೆಸಿ ಒಗ್ಗಟ್ಟಾಗುವ ಮೂಲಕ ನಾಡು ನುಡಿಯ ಏಳಿಗೆಗೆ ಎಲ್ಲರೂ ಒಂದಾಗಬೇಕೆಂದು ಕರೆಯಿತ್ತರು.
ರಾಸ್ ಅಲ್ ಖೈಮಾದಲ್ಲಿ ಇದೇ ಮೊದಲ ಬಾರಿಗೆ ಯಕ್ಷಗಾನವನ್ನು ಆಯೋಜಿಸಿದ್ದು,ಯಕ್ಷಗಾನ ಅಭ್ಯಾಸ ತರಗತಿ ಕೇಂದ್ರ ದುಬೈ ಇದರ ಪ್ರಬುದ್ಧ ಕಲಾವಿದರು, ಕೇಂದ್ರದ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜ ಹಾಗೂ ಶೇಖರ್ ಡಿ.ಶೆಟ್ಟಿಗಾರ್ ಇವರ ದಕ್ಷ ನಿರ್ದೇಶನದಲ್ಲಿ ಇಂದ್ರಜಿತು ಕಾಳಗ ಎಂಬ ಪೌರಾಣಿಕ ಪ್ರಸಂಗವನ್ನು ಅದ್ಭುತವಾಗಿ ಅಭಿನಯಿಸಿ ರಾಸ್ ಅಲ್ ಖೈಮಾದ ಪ್ರೇಕ್ಷಕರಿಗೆ ಯಕ್ಷಗಾನದ ರಸದೌತಣವನ್ನುಣಿಸುವಲ್ಲಿ ಯಶಸ್ವಿಯಾದರು. ಸಾಂಸ್ಕ್ರತಿಕ ಕಾರ್ಯಕ್ರಮದಂಗವಾಗಿ ಸಂಗೀತ, ನೃತ್ಯ ವಿವಿಧ ವಿನೋದಾವಳಿಗಳು ಜರುಗಿದವು. ಯುಎಇಯ ರಸ್ ಅಲ್ ಖೈಮಾ ಭಾಗದಲ್ಲೂ ಸುಮಾರು ನಾಲ್ಕುನೂರಕ್ಕಿಂತಲೂ ಮಿಕ್ಕಿ ಹೊರನಾಡ ಕನ್ನಡಿಗ ಬಾಂಧವರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಸಂಘದ ಅಧ್ಯಕ್ಷರಾದ ಕಡ್ತಲ ಸಂತೋಷ್ ಹೆಗ್ಡೆ,ಉಪಾಧ್ಯಕ್ಷರಾದ ರಮೇಶ್ ರಂಗಪ್ಪ, ಡಾ|ಲೇಖ, ಕಾರ್ಯದರ್ಶಿ ಜಾನ್ ಇಮಾನ್ಯುಯೆಲ್,ಖಜಾಂಚಿ ಶ್ರೀಮತಿ ದೀಪಾ ಶೆಟ್ಟಿ ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಬಹಳಷ್ಟು ಶ್ರಮ ವಹಿಸಿದ್ದರು.