Connect with us

LATEST NEWS

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರಾಜ್ಯದ ಸಿಬ್ಬಂದಿ ನೇಮಿಸಲು ಒತ್ತಾಯ

ಉಡುಪಿ: ಜಿಲ್ಲೆಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಹುತೇಕ ಹೊರರಾಜ್ಯದ ಸಿಬ್ಬಂದಿಗಳೇ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಸ್ಥಳೀಯರಿಗೆ ಸಿಬ್ಬಂದಿಯೊಂದಿಗಿನ ಭಾಷಾ ಸಮಸ್ಯೆಯಾಗುತ್ತಿದೆ. ಈ ಹಿನ್ನಲೆ ಸ್ಥಳೀಯರು ಬ್ಯಾಂಕ್ ಸೇವೆಗಳನ್ನು ಪಡೆಯಲು ಹಿಂದೇಟು ಹಾಕುವ ಸಾಧ್ಯತೆ ಇದ್ದು ಈ ಹಿನ್ನಲೆ ಸ್ಥಳೀಯರಿಗೆ ನೆರವಾಗುವಂತೆ ಕನಿಷ್ಠ ಪ್ರಮಾಣದ ರಾಜ್ಯದ ಸಿಬ್ಬಂದಿಗಳನ್ನು ನೇಮಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಒತ್ತಾಯಿಸಿದ್ದಾರೆ.


ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನಿಷ್ಠ 2 ಸಿಬ್ಬಂದಿಯಾದರೂ ಕನ್ನಡದವರು ಇದ್ದಲ್ಲಿ ಸ್ಥಳೀಯರಿಗೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಅನ್ಯರಾಜ್ಯದ ಸಿಬ್ಬಂದಿಯೊಂದಿಗಿನ ಭಾಷಾ ಸಮಸ್ಯೆಯಿಂದ, ಬ್ಯಾಂಕ್‌ಗಳಲ್ಲಿ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಲಭ್ಯವಾಗುವುದಿಲ್ಲ ಎಂದು ಸದಸ್ಯ ಬಾಬು ಶೆಟ್ಟಿ ತಿಳಿಸಿದರು.


ಬ್ಯಾಂಕಿಂಗ್ ನೇಮಕಾತಿಯಲ್ಲಿ ಕನ್ನಡಿಗರು ನಿರಾಸಕ್ತಿ ತೋರುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಂಧ್ರ ಪ್ರದೇಶ, ಬಿಹಾರ ಹಾಗೂ ಉತ್ತರ ಪ್ರದೇಶದ ಸಿಬ್ಬಂದಿ ಆಯ್ಕೆಯಾಗುತ್ತಿದ್ದಾರೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ್ ತಿಳಿಸಿದರು.
ಬ್ಯಾಂಕ್‌ಗಳಲ್ಲಿ ವಿದ್ಯಾಭ್ಯಾಸ ಸಾಲ ಮತ್ತು ಮುದ್ರಾ ಯೋಜನೆಯಡಿ ಸಲ್ಲಿಕೆಯಾಗುವ ರ‍್ಜಿಗಳನ್ನು ಕೂಡಲೇ ಮಂಜೂರು ಮಾಡಿ, ಫಲಾನುಭವಿಗಳಿಗೆ ಸೌಲಭ್ಯ ಒದಗಿಸಿ. ಸಣ್ಣ ಪುಟ್ಟ ಕಾರಣಗಳಿಗೆ ರ‍್ಜಿಯನ್ನು ತಿರಸ್ಕರಿಸಬೇಡಿ. ಈ ಬಗ್ಗೆ ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ನೀಡಿ ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಹೆಗ್ಡೆ ಹೇಳಿದರು.