LATEST NEWS
ನನ್ನ ಪ್ರಕಾರ ಸಂಸ್ಕೃತ ರಾಷ್ಟ್ರ ಭಾಷೆಯಾಗಬೇಕು- ಆದರೂ ಸದ್ಯಕ್ಕೆ ಹಿಂದಿಯೇ ನಮ್ಮ ರಾಷ್ಟ್ರ ಭಾಷೆ
ಮುಂಬೈ ಎಪ್ರಿಲ್ 30: ಸುದೀಪ್ ಹಾಗೂ ಅಜಯ್ ದೇವಗನ್ ನಡುವೆ ನಡೆದ ಹಿಂದಿ ರಾಷ್ಟ್ರಭಾಷೆ ಕುರಿತಂತೆ ವಿವಾದಕ್ಕೆ ಇದೀಗ ವಿವಾದಗಳ ರಾಣಿ ಕಂಗನಾ ರಾಣಾವತ್ ಎಂಟ್ರಿ ಆಗಿದ್ದು, ಸದ್ಯಕ್ಕೆ ಹಿಂದಿಯೇ ನಮ್ಮ ರಾಷ್ಟ್ರಭಾಷೆ ಎಂದು ಹೇಳಿ ಅಜಯ್ ದೇವಗನ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹಿಂದಿ ರಾಷ್ಟ್ರ ಭಾಷೆ ಎಂದು ನಟ ಅಜಯ್ ದೇವಗನ್ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಭಾಷೆ ಹಾಗೂ ಸಂಸ್ಕೃತಿ ಬಗ್ಗೆ ಹೆಮ್ಮ ಪಡುವ ಹಕ್ಕಿದೆ ಎಂದು ಬಾಲಿವುಡ್ ನಟಿ ಕಂಗನಾ ರನೌತ್ ಹೇಳಿದ್ದಾರೆ.
ಧಾಕಡ್ ಸಿನಿಮಾದ ಟ್ರೇಲರ್ ಬಿಡುಗಡೆ ವೇಳೆ ಈ ಕುರಿತು ಮಾತನಾಡಿದ ಕಂಗನಾ, ‘ರಾಷ್ಟ್ರೀಯ ಭಾಷೆಯನ್ನಾಗಿ ಹಿಂದಿಯನ್ನು ವಿರೋಧಿಸುವುದು, ಸಂವಿಧಾನವನ್ನು ವಿರೋಧಿಸಿದಂತೆ. ಹಿಂದಿ ನಮ್ಮ ರಾಷ್ಟ್ರದ ಭಾಷೆ ಆಗಿರುವುದರಿಂದ, ಅಜಯ್ ಅವರು ರಾಷ್ಟ್ರೀಯ ಭಾಷೆ ಎಂದು ಕರೆದಿದ್ದಾರೆ. ಆದ್ದರಿಂದ ಇದರಲ್ಲಿ ಅವರ ತಪ್ಪಿಲ್ಲ. ಹಾಗೆಯೇ ಯಾರಾದರೂ ಕನ್ನಡ ಹಿಂದಿ ಭಾಷೆಗಿಂತ ಹಳೆಯದು ಅಥವಾ ತಮಿಳು ಹಳೆಯ ಭಾಷೆ ಎಂದು ಹೇಳಿದರೆ ತಪ್ಪಿಲ್ಲ’ ಎಂದರು. ‘ಸಂಸ್ಕೃತ ನಮ್ಮ ರಾಷ್ಟ್ರ ಭಾಷೆ ಆಗಬೇಕೆಂದು ನಾನು ಬಯಸುತ್ತೇನೆ. ಹಿಂದಿ, ಇಂಗ್ಲಿಷ್, ಜರ್ಮನಿ, ಫ್ರೆಂಚ್‌ನಂತಹ ಭಾಷೆಗಳು ಹೊರಹೊಮ್ಮಿರುವುದೇ ಸಂಸ್ಕೃತದಿಂದ. ನಮಗೆ ಸಂಸ್ಕೃತ ಏಕೆ ರಾಷ್ಟ್ರೀಯ ಭಾಷೆಯಾಗಿಲ್ಲ? ನಮ್ಮ ಶಾಲೆಗಳಲ್ಲಿ ಸಂಸ್ಕೃತವನ್ನು ಏಕೆ ಕಡ್ಡಾಯವಾಗಿ ಕಲಿಸುವುದಿಲ್ಲ?’ ಎಂದು ಕಂಗನಾ ಪ್ರಶ್ನಿಸಿದರು. ‘ಹಿಂದಿಯನ್ನು ವಿರೋಧಿಸಿದರೆ ಕೇಂದ್ರ ಸರ್ಕಾರವನ್ನು ವಿರೋಧಿಸಿದಂತೆ. ದೆಹಲಿಯನ್ನು ಕೇಂದ್ರವನ್ನಾಗಿ ನೀವು ಸ್ವೀಕಾರ ಮಾಡುವುದಿಲ್ಲ ಎಂದರ್ಥ. ಸಂವಿಧಾನದಲ್ಲಿ ಏನೇ ಮಾಡಿದರೂ, ಯಾವುದೇ ಕಾನೂನುಗಳನ್ನು ತಿದ್ದುಪಡಿ ಮಾಡಿದರೂ ಅದು ದೆಹಲಿಯಲ್ಲೇ ಹಾಗೂ ಹಿಂದಿಯಲ್ಲೇ’ ಎಂದು ಹೇಳುವ ಮೂಲಕ ಕಂಗನಾ, ಅಜಯ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.