KARNATAKA
ಕಾಂತಾರಕ್ಕೆ ವಿಘ್ನಗಳ ಮೇಲೆ ವಿಘ್ನ -ಮಾಣಿ ಜಲಾಶಯದಲ್ಲಿ ನಡೆದ ಘಟನೆ ಕುರಿತಂತೆ ಚಿತ್ರ ತಂಡಕ್ಕೆ ನೋಟಿಸ್

ಶಿವಮೊಗ್ಗ ಜೂನ್ 16: ಕಾಂತಾರ ಸಿನೆಮಾಕ್ಕೆ ಸಂಕಷ್ಟಗಳ ಮೇಲೆ ಸಂಕಷ್ಟಗಳು ಬರಲಾರಂಭಿಸಿದೆ. ಈಗಾಗಲೇ ಕಾಂತಾರ ಚಾಪ್ಟರ್ 1 ಸಿನೆಮಾ ಶೂಟಿಂಗ್ ಪ್ರಾರಂಭವಾದ ಬಳಿಕ ಮೂವರು ಕಲಾವಿದರು ಸಾವನಪ್ಪಿದ್ದು, ಇದೀಗ ಕೂದಲೆಳೆ ಅಂತರದಲ್ಲೇ ಭಾರೀ ಅನಾಹುತವೊಂದು ತಪ್ಪಿದ್ದು, ಇದೀಗ ಈ ಘಟನೆಗೆ ಸಂಬಂಧಿಸಿದಂತೆ . ಆ ಬಗ್ಗೆ ಹೊಸನಗರ ತಹಶೀಲ್ದಾರ್ ಸ್ಪಷ್ಟನೆ ಕೇಳಿದ್ದಾರೆ. ಚಿತ್ರೀಕರಣಕ್ಕಾಗಿ ಪಡೆದಿರುವ ಅನುಮತಿ ಪತ್ರಗಳನ್ನು ಹಾಜರುಪಡಿಸುವಂತೆ ಈ ನೋಟಿಸ್ನಲ್ಲಿ ಸೂಚಿಸಲಾಗಿದೆ.
ಇತ್ತೀಚೆಗೆ ಚಿತ್ರೀಕರಣದ ವೇಳೆ ಮಾಣಿ ಡ್ಯಾಮ್ ಹಿನ್ನೀರಿನಲ್ಲಿ ದೋಣಿ ಮಗುಚಿ ಅವಘಡ ಸಂಭವಿಸಿದ್ದರ ಬಗ್ಗೆ ವರದಿ ಆಗಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡುವಂತೆ ಕಾಂತಾರ ಚಿತ್ರತಂಡಕ್ಕೆ ನೋಟಿಸ್ ನೀಡಲಾಗಿದೆ. ಶೂಟಿಂಗ್‌ಗೆ ಪಡೆದ ಅನುಮತಿ ಪತ್ರ ಹಾಜರುಪಡಿಸಲು ಸೂಚಿಸಲಾಗಿದೆ. ನೋಟಿಸ್ ತಲುಪಿದ 3 ದಿನದೊಳಗೆ ಹಾಜರುಪಡಿಸಲು ಸೂಚನೆ ನೀಡಲಾಗಿದ್ದು, ಇಲ್ಲದಿದ್ದರೆ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಎಚ್ಚರಿಕೆ ನೀಡಿದ್ದಾರೆ.

ನೋಟಿಸ್ ನಲ್ಲಿ ಮಾಣಿ ಜಲಾಶಯದಲ್ಲಿ ಶೂಟಿಂಗ್ ಮಾಡಲು ವಿವಿಧ ಇಲಾಖೆಗಳಿಂದ ಅನುಮತಿ ಪಡೆದಿರುವ ಬಗ್ಗೆ ತಾಲೂಕು ಆಡಳಿತಕ್ಕಾಗಲಿ, ಜಿಲ್ಲಾ ಆಡಳಿತಕ್ಕಾಗಲಿ ಯಾವುದೇ ಮಾಹಿತಿಯನ್ನ ಚಿತ್ರತಂಡ ನೀಡಿರುವುದಿಲ್ಲ. ಶೂಟಿಂಗ್ ವೇಳೆ ಮಾಣಿ ಜಲಾಶಯದಲ್ಲಿ ದೋಣಿ ಮಗುಚಿ 30 ಜನ ಈಜಿ ದಡ ಸೇರಿರುವ ಬಗ್ಗೆ ಸ್ಪಷ್ಟನೆ ಮಾತ್ರ ನೀಡಿದ್ದೀರಿ. ಈ ಬಗ್ಗೆ ಮಾನ್ಯ ಜಿಲ್ಲಾ ಅಧಿಕಾರಿಯವರು ಈ ಬಗ್ಗೆ ವರದಿ ಕೇಳಿದ್ದು, ರಾಜಸ್ವ ನಿರೀಕ್ಷಕರು, ನಗರ ಹೋಬಳಿರವರು ನಿಮ್ಮ ಸಂಸ್ಥೆಯ ಮ್ಯಾನೇಜರ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅನುಮತಿ ಪತ್ರಗಳನ್ನ ಹಾಜರುಪಡಿಸುವಂತೆ ಹೇಳಿದ್ದರೂ ಯಾವುದೇ ಸ್ಪಂದನೆ ಸಿಕ್ಕಿರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮಾಣಿ ಜಲಾಶಯದಲ್ಲಿ ನಡೆದ ಘಟನೆಯ ಬಗ್ಗೆ ಸಂಪೂರ್ಣ ವರದಿಯನ್ನು ನೀಡುವಂತೆ ಹೊಸನಗರ ತಹಶೀಲ್ದಾರ್ ಕಚೇರಿಯಿಂದ ಪತ್ರ ಬರೆದಿದ್ದು, ಪತ್ರ ತಲುಪಿದ ಮೂರುದಿನಗಳ ಒಳಗಾಗಿ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ. ಇಲ್ಲವಾದಲ್ಲಿ ನಂತರ ಶೂಟಿಂಗ್‌ಗೆ ನೀಡಿರುವ ಅನುಮತಿಯನ್ನ ರದ್ದುಗೊಳಿಸಿ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ತಹಶೀಲ್ದಾರ್ ಕಛೇರಿಯಿಂದ ಕಾಂತಾರ ಚಿತ್ರತಂಡಕ್ಕೆ ಖಡಕ್ ಪತ್ರವೊಂದು ರವಾನೆಯಾಗಿದೆ. ಈಗ ತಹಶೀಲ್ದಾರ್ ನೋಟಿಸ್‌ಗೆ ಉತ್ತರ ಕೊಡುವ ಅನಿವಾರ್ಯತೆ ಚಿತ್ರತಂಡಕ್ಕೆ ಎದುರಾಗಿದೆ. ಜೊತೆಗೆ ಚಿತ್ರೀಕರಣದ ಅನುಮತಿ ಪತ್ರಗಳನ್ನು ಸಲ್ಲಿಸಬೇಕಾಗಿದೆ.