LATEST NEWS
ನವೆಂಬರ್ 26 ರಿಂದ ಕಂಬಳ ಋತು ಪ್ರಾರಂಭ….!!
ಮಂಗಳೂರು ನವೆಂಬರ್ 02: ಕರಾವಳಿಯ ನೆಚ್ಚಿನ ಜಾನಪದ ಕ್ರಿಡೆ ಕಂಬಳದ ಋತು ಈ ಬಾರಿ ಮತ್ತೆ ಮುಂದೂಡಿಕೆಯಾಗಿದ್ದು, ಇದೇ ವಾರ ಶಿರ್ವದಲ್ಲಿ ಜೋಡುಕರೆ ಕಂಬಳ ವಿಧ್ಯುಕ್ತವಾಗಿ ಆರಂಭಗೊಳ್ಳಬೇಕಿತ್ತು. ವೇಳಾಪಟ್ಟಿ ಮತ್ತೆ ಬದಲಾವಣೆ ಕಂಡಿದ್ದು, ನವೆಂಬರ್ 26ರಂದು ಕಕ್ಯಪದವು ಸತ್ಯಧರ್ಮ ಜೋಡುಕರೆ ಕಂಬಳದೊಂದಿಗೆ ಈ ಸಾಲಿನ ಕಂಬಳಗಳಿಗೆ ಚಾಲನೆ ದೊರಕಲಿದೆ.
ಈ ಋತುವಿನ ಮೊದಲ ಮೂರು ಕಂಬಳಗಳಾದ ನವೆಂಬರ್ 5- ಶಿರ್ವ, ನವೆಂಬರ್ 12- ಪಿಲಿಕುಳ, ನವೆಂಬರ್ 19- ಪಜೀರು ಮುಂದೂಡಲ್ಪಟ್ಟಿರುವುದರಿಂದ ಕಂಬಳ ಆರಂಭ ಮೂರು ವಾರ ವಿಳಂಬವಾಗಲಿದೆ. ಇದರೊಂದಿಗೆ ಒಟ್ಟು ಕಂಬಳಗಳ ಸಂಖ್ಯೆ 24ರಿಂದ 21ಕ್ಕೆ ಇಳಿಕೆಯಾಗಲಿದೆ. ಸಾಂಪ್ರದಾಯಿಕ ಕಂಬಳವಾಗಿರುವ ಶಿರ್ವ ಕಂಬಳ ಹಗಲು ಮಾತ್ರ ನಡೆಯುತ್ತದೆ. ಈ ಬಾರಿ ಗದ್ದೆಯಲ್ಲಿ ಭತ್ತ ನಾಟಿ ವಿಳಂಬವಾಗಿ, ಮಳೆಯ ನಡುವೆ ಕಟಾವು ಇನ್ನಷ್ಟೇ ನಡೆಯಬೇಕಿರುವುದರಿಂದ ಶಿರ್ವ ಕಂಬಳವನ್ನು ಒಂದು ತಿಂಗಳು ಮುಂದೂಡಲಾಗಿದ್ದು, ಡಿಸೆಂಬರ್ 13ರಂದು ಮಂಗಳವಾರ ನಡೆಯಲಿದೆ.
ನವೆಂಬರ್ 19ರಂದು ನಿಗದಿಯಾಗಿದ್ದ ಪಜೀರು ಕಂಬಳ ಕರೆಗೆ ಮೊನ್ನೆಯಷ್ಟೇ ಶಿಲಾನ್ಯಾಸ ನಡೆದಿದೆ. ಕರೆ ಇನ್ನಷ್ಟೇ ಸಿದ್ಧವಾಗಬೇಕಿರುವುದರಿಂದ ಹೊಸ ದಿನಾಂಕ ನೀಡಲಾಗಿಲ್ಲ. ಕಂಬಳ ಸಮಿತಿಯು ಪಿಲಿಕುಳ ಕಂಬಳಕ್ಕೆ ನ.12ರ ದಿನಾಂಕ ನೀಡಿತ್ತು. ಆದರೆ ಕರೆ ಸಿದ್ಧತೆ ಕೆಲಸವೇ ಆರಂಭಗೊಂಡಿಲ್ಲ. ಈ ನಡುವೆ, ‘ಈ ಬಾರಿ ಕಂಬಳ ಮಾಡೋಣ’ ಎಂದು ಆಸಕ್ತಿ ತೋರಿಸಿದ್ದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ವರ್ಗಾವಣೆಗೊಂಡಿದ್ದಾರೆ. ಹೊಸ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಇನ್ನಷ್ಟೇ ಅಧಿಕಾರ ವಹಿಸಿಕೊಳ್ಳಬೇಕಿದೆ. ಹೀಗಾಗಿ ಪಿಲಿಕುಳದಲ್ಲಿ ಈ ಬಾರಿಯೂ ಕಂಬಳ ನಡೆಯುವ ಸಾಧ್ಯತೆ ಗೋಚರಿಸುತ್ತಿಲ್ಲ.